"ಮಸೂದೆಗಳಿಗೆ ಸಂಬಂಧಿಸಿ ಬೆದರಿಕೆಯೊಡ್ಡಲಾಗಿತ್ತು": ಸಂಸತ್ ಅಧಿವೇಶನ ಹಠಾತ್ ನಿಲ್ಲಿಸಿದ ಬಗ್ಗೆ ಸಚಿವರ ಪ್ರತಿಕ್ರಿಯೆ

Photo: Twitter/@ndtv
ಹೊಸದಿಲ್ಲಿ: ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ಎರಡು ದಿನ ಮೊದಲೇ ಹಠಾತ್ ನಿಲ್ಲಿಸಿದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ವಿಪಕ್ಷಗಳ ವ್ಯಾಪಕ ಆಕ್ರೋಶದ ನಡುವೆ ಇಂದು ಏಳು ಕೇಂದ್ರ ಸಚಿವರುಗಳು ಪತ್ರಿಕಾಗೋಷ್ಠಿ ನಡೆಸಿ ತಮಗೆ ಮಸೂದೆಗಳಿಗೆ ಸಂಬಂಧಿಸಿದಂತೆ ಬೆದರಿಕೆಯೊಡ್ಡಲಾಗಿತ್ತು ಎಂದು ಆರೋಪಿಸಿ ವಿಪಕ್ಷಗಳ ಆರೋಪಗಳಿಗೆ ಪ್ರತ್ಯಾರೋಪ ಹೊರಿಸಿದ್ದಾರೆ.
ತಮ್ಮ ಅನುಚಿತ ವರ್ತನೆಗೆ ವಿಪಕ್ಷ ಸದಸ್ಯರು ಕ್ಷಮೆ ಕೇಳಬೇಕು ಎಂದು ಸಚಿವರು ಹೇಳಿದ್ದಾರೆ.
ಸಂಸತ್ತಿನ ಭದ್ರತಾ ಸಿಬ್ಬಂದಿಯಲ್ಲದ ಹೊರಗಿನವರನ್ನು ಕರೆಸಿ ವಿಪಕ್ಷ ನಾಯಕರು ಹಾಗೂ ಮಹಿಳಾ ಸಂಸದರೂ ಸೇರಿದಂತೆ ಇತರ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ವಿಪಕ್ಷಗಳು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
"ಈ ದೇಶದ ಜನರು ಸರಕಾರಕ್ಕೆ ಜನರ ಸಮಸ್ಯೆಗಳಿಗೆ ಪರಿಹಾರವೊದಗಿಸುವ ಕರ್ತವ್ಯ ನೀಡಿದ್ದಾರೆ. ಆದರೆ ವಿಪಕ್ಷಗಳು ಸಂಸತ್ ಕಲಾಪಕ್ಕೆ ಅಡ್ಡಿಯುಂಟು ಮಾಡಿವೆ. ಮೊಸಳೆ ಕಣ್ಣೀರು ಸುರಿಸುವ ಬದಲು ವಿಪಕ್ಷಗಳು ನಾಚಿಕೆಪಟ್ಟುಕೊಳ್ಳಬೇಕು ಹಾಗೂ ದೇಶದ ಜನರಿಂದ ಕ್ಷಮೆ ಕೋರಬೇಕು,'' ಎಂದು ಸಚಿವ ಅನುರಾಗ್ ಠಾಕುರ್ ಹೇಳಿದರು.
"ಮೊನ್ನೆ ಕೆಲ ಸಂಸದರು, ಸಂಸತ್ತಿನ ಮೇಜುಗಳ ಮೇಲೆ ಹತ್ತಿದ್ದರು. ಅವರಿಗೆ ತಮ್ಮ ಬಗ್ಗೆ ದೊಡ್ಡ ಕೆಲಸ ಮಾಡಿದ ಹೆಮ್ಮೆಯಿತ್ತು. ನಂತರ ಅದರ ವೀಡಿಯೋ ತೆಗೆದು ಅವರು ಟ್ವೀಟ್ ಮಾಡಿದ್ದರು,'' ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
"ವಿಪಕ್ಷಗಳು ಕೆಟ್ಟದ್ದಾಗಿ ನಡೆದುಕೊಂಡಿದ್ದವು. ಅವರು ಪೀಠೋಪಕರಣಗಳನ್ನು, ಬಾಗಿಲುಗಳನ್ನು ಒಡೆದರು, ಹೇಳಿಕೆ ನೀಡುತ್ತಿದ್ದ ಸಚಿವರ ಕೈಗಳಿಂದ ಕಾಗದಪತ್ರಗಳನ್ನು ಸೆಳೆದರು, ಮಾರ್ಷಲ್ಗಳ ಮೇಲೆಯೇ ಹಲ್ಲೆ ನಡೆಸಿದರು, ಮಹಿಳಾ ಮಾರ್ಷಲ್ ಒಬ್ಬರಿಗೆ ಗಾಯವಾಯಿತು, ಅವರು ಡೆಸ್ಕ್, ಕುರ್ಚಿಗಳನ್ನು ತುಳಿದಿದ್ದಾರೆ. ಇದು ಅಸ್ವೀಕಾರಾರ್ಹ ವರ್ತನೆ, ಅವರು ಇಡೀ ದೇಶಕ್ಕೆ ಅವಮಾನಿಸಿದ್ದಾರೆ,'' ಎಂದು ಸಚಿವ ಪಿಯುಷ್ ಗೋಯೆಲ್ ಹೇಳಿದರು.







