ಸಾರ್ವಜನಿಕರಿಗೆ ತೊಂದರೆಯಾಗುವ ಗೌರವ ವಂದನೆ ಬೇಡ: ಸಿಎಂ ಬಸವರಾಜ ಬೊಮ್ಮಾಯಿ

ಮಂಗಳೂರು, ಆ.12: ಇನ್ನು ಮುಂದೆ ಪೊಲೀಸರು ವಿಮಾನ ನಿಲ್ದಾಣ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಗೌರವ ವಂದನೆ ನೀಡುವುದು ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಗೌರವ ವಂದನೆ ನೀಡಿದ ಬಳಿಕ ಸಿಎಂಗೆ ಇದು ಜನರಿಗೆ ಸಮಸ್ಯೆಯಾಗುತ್ತದೆ ಎಂದು ಮನಗಂಡರು. ಆ ಹಿನ್ನೆಲೆಯಲ್ಲಿ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕರೆದು ಮಾತನಾಡಿದ ಸಿಎಂ, ಇನ್ನು ಮುಂದೆ ತಾನು ಹೋಗುವಾಗ, ಬರುವಾಗ ಏರ್‌ಪೋರ್ಟ್, ರೈಲ್ವೆಸ್ಟೇಷನ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಗೌರವ ರಕ್ಷೆ ನೀಡುವುದು ಬೇಡ, ಇದರಿಂದ ಜನರಿಗೆ ತೊಂದರೆಯಾಗುತ್ತದೆ, ಈ ಬಗ್ಗೆ ಶೀಘ್ರ ಲಿಖಿತ ಆದೇಶ ಹೊರಡಿಸುವುದಾಗಿ ತಿಳಿಸಿದರು.
ಬಿಗುವಿನ ಕ್ರಮ ಅನಿವಾರ್ಯ
ಕೋವಿಡ್ 1, 2ನೇ ಅಲೆಯ ಅನುಭವದ ಆಧಾರದಲ್ಲಿ ಈ ಬಾರಿ ‘ಚಿಕಿತ್ಸೆಗಿಂತ ತಡೆಯುವಿಕೆ ಉತ್ತಮ’ ಎಂಬಂತೆ ಅನೇಕ ನಿರ್ಬಂಧಗಳನ್ನು ಕೈಗೊಂಡಿದ್ದೇನೆ, ನಮ್ಮ ರಾಜ್ಯ ಅತಿ ಹೆಚ್ಚು ಸಂಕಷ್ಟಕ್ಕೊಳಗಾಗಿದೆ. ಈಗಲೇ ತಡೆಯದಿದ್ದರೆ ಮತ್ತೆ ಮುಂದೆ ಲಾಕ್‌ಡೌನ್ ಆಗಿ ಜನರ ಬದುಕು ದುಸ್ತರವಾಗಬಹುದು, ಅದನ್ನು ತಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ.





