ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹುಕ್ಕಾ ಬಾರ್, ಇಂದಿರಾ ಕ್ಯಾಂಟೀನ್ ತೆರೆಯಲಿ: ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ

ಬೆಂಗಳೂರು, ಆ.12: ಕಾಂಗ್ರೆಸ್ ಕಚೇರಿಯಲ್ಲಿ ಬೇಕಾದರೆ ಇಂದಿರಾ ಕ್ಯಾಂಟೀನ್ ಆದರೂ ತೆರೆಯಲಿ, ನೆಹರು ಹೆಸರಿನಲ್ಲಿ ಹುಕ್ಕಾ ಬಾರ್ ಬೇಕಾದರೂ ತೆರೆಯಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗುರುವಾರ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದಿಂದ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸುವಂತೆ ಮುಖ್ಯಮಂತ್ರಿ ಸಲಹೆ ನೀಡಿದ್ದೇನೆ. ಆ ಕುರಿತು ಚರ್ಚೆ ನಡೆಯಲಿದೆ ಎಂದರು.
1984ರಲ್ಲಿ ಇಂದಿರಾ ಗಾಂಧಿ ಹತ್ಯೆ ನಡೆದಿದೆ. 2017-18ರಲ್ಲಿ ಇಂದಿರಾ ಗಾಂಧಿ ಕ್ಯಾಂಟೀನ್ ಆರಂಭಿಸಲಾಯಿತು. ಇಂದಿರಾ ಗಾಂಧಿ ಅವರ ಮೇಲೆ ಪ್ರೇಮದಿಂದ ಈ ಕ್ಯಾಂಟೀನ್ ಆರಂಭಿಸಿಲ್ಲ. ಅದು ರಾಜಕಾರಣಕ್ಕಾಗಿ ಮತ್ತು ದುಡ್ಡು ಹೊಡೆಯಲು ಮಾಡಿದ ನಿರ್ಧಾರ. ಬದ್ಧತೆಗಾಗಿ ಅಲ್ಲ ಎಂದು ಸಿ.ಟಿ.ರವಿ ಕಿಡಿಗಾರಿದರು.
ಇಂದಿರಾ ಗಾಂಧಿ ಅವರ ಎಲ್ಲ ನಿರ್ಧಾರಗಳನ್ನು ವಿರೋಧಿಸುವ ಪೂರ್ವಗ್ರಹ ಪೀಡಿತ ಮನಸ್ಥಿತಿ ನಮ್ಮದಲ್ಲ. ಆದರೆ, ದೇಶಕ್ಕೆ ನೆಹರೂ, ಇಂದಿರಾ ಗಾಂಧಿ ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಅವರ ಗುಲಾಮರು ಮಾತ್ರ ಒಪ್ಪಿಕೊಳ್ಳಲು ಸಾಧ್ಯ. ಸ್ವಾತಂತ್ರ್ಯ ಲಭಿಸಲು ಅವರು ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಮೂರ್ಖರು ಮತ್ತು ಗುಲಾಮರು ಮಾತ್ರ ಒಪ್ಪಿಕೊಳ್ಳುತ್ತಾರೆ. ನಾವು ಮೂರ್ಖರು ಮತ್ತು ಗುಲಾಮರಲ್ಲ ಎಂದು ರವಿ ಹೇಳಿದರು.
217 ಯೋಜನೆಗಳಿಗೆ ಅವರ ಹೆಸರು ಇಡಲಾಗಿದೆ. ಹಾಗಿದ್ದರೆ ಬೇರೆ ಯಾರೂ ದೇಶಕ್ಕೆ ಕೊಡುಗೆ ನೀಡಿಲ್ಲವೇ? ಅನ್ನಪೂರ್ಣೇಶ್ವರಿ ರಾಜಕೀಯ ವ್ಯಕ್ತಿಯಲ್ಲ. ಅನ್ನದ ದೇವತೆ. ಬಡವರಿಗೆ ಅನ್ನಪೂರ್ಣೇಶ್ವರಿ ಹೆಸರಿನಲ್ಲಿ ಅನ್ನ ಕೊಟ್ಟರೇನು? ಇಂದಿರಾ ಹೆಸರಲ್ಲಿ ಅನ್ನ ಕೊಟ್ಟರೇನು? ಜನರ ತೆರಿಗೆಯಿಂದ ಅನ್ನ ಕೊಡುವುದಲ್ಲವೇ. ನೆಹರೂ ಅವರ ಒಳ್ಳೆಯ ತೀರ್ಮಾನಗಳನ್ನು ನಮ್ಮ ಪಕ್ಷ ಒಪ್ಪಿಕೊಳ್ಳಲಿದೆ. ಆದರೆ, ಕೆಲವು ಎಡೆಬಿಡಂಗಿತನ ಮಾಡಿದ್ದಾರೆ. ಅವುಗಳನ್ನು ಸರಿಪಡಿಸುವ ಕೆಲಸವನ್ನು 370ನೇ ವಿಧಿ ರದ್ದು ಮಾಡುವ ಮೂಲಕ ಮಾಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಹಿಂದೂ ಕಾರ್ಯಕರ್ತರ ಮೇಲೆ ದುರುದ್ದೇಶದಿಂದ ಹಾಕಿದ್ದ ಪ್ರಕರಣಗಳನ್ನು ಹಿಂದಿನ ಕಾಂಗ್ರೆಸ್ ಸರಕಾರ ರದ್ದುಪಡಿಸಿಲ್ಲ. ಕೇವಲ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳ ಕೇಸು ಹಿಂಪಡೆದಿದ್ದರು. ಇದೀಗ ನಮ್ಮ ಆಗ್ರಹಕ್ಕಾಗಿಯೇ ಹಿಂದೂಗಳ ಮೇಲಿನ ದುರುದ್ದೇಶದ ಕೇಸು ರದ್ದಾಗುತ್ತಿದೆ ಎಂದು ಅವರು ವಿವರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯರಾದ ಎಚ್.ಡಿ.ದೇವೇಗೌಡರ ಆಶೀರ್ವಾದ ಪಡೆದಿದ್ದು ಖಂಡಿತಾ ತಪ್ಪಲ್ಲ. ಪಕ್ಷದ ಒಳಗೆ ರಾಜಕೀಯ ರಾಜಿ ಇರಬೇಕು. ಪಕ್ಷದ ಹೊರಗೆ ಇರಬಾರದು ಎಂದ ಅವರು, ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ವೈಯಕ್ತಿಕ ಬದುಕು ಚೆನ್ನಾಗಿರಲಿ ಎಂದು ಹಾರೈಸಿದರು.
ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಕಾರಿಗೆ ಬೆಂಕಿ ಹಾಕಿ ಸುಟ್ಟ ಕೃತ್ಯವನ್ನು ಬಿಜೆಪಿ ಖಂಡಿಸುತ್ತದೆ. ವಿಶೇಷ ತನಿಖಾ ದಳವನ್ನು ರಚಿಸಿ ಈ ಹೀನ ಕೃತ್ಯ ಮಾಡಿದವರು, ಅವರ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಭಯದ ಮೂಲಕ ಜನ ನಾಯಕತ್ವವನ್ನು ಮಣಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.
ಬಿಜೆಪಿಗೆ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ ಎಂಬುದು ಒಂದು ಬದ್ಧತೆಯ ವಿಚಾರವಾಗಿದೆ. ಅಂತ್ಯೋದಯದ ಪರಿಕಲ್ಪನೆಗೆ, ಸಮಾಜದ ಎಲ್ಲ ವರ್ಗಕ್ಕೂ ಅವಕಾಶ ಸಿಗಬೇಕೆಂಬ ನಮ್ಮ ಆಲೋಚನೆಗೆ ಪೂರಕವಾಗಿ ನಮ್ಮ ಸರಕಾರ ನಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ವೈದ್ಯಕೀಯ ಶಿಕ್ಷಣದಲ್ಲಿ ಒಬಿಸಿಗೆ ಮೀಸಲಾತಿ ಕಲ್ಪಿಸುವ ಕೆಲಸ ಮಾಡಲಾಗಿದೆ. ದಲಿತರಿಗೆ ಸುಪ್ರೀಂ ಕೋರ್ಟ್ ಮುಂಭಡ್ತಿ ನಿರಾಕರಿಸಿದರೂ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ವಿವರಿಸಿದರು.
ನಮ್ಮ ರಾಜಕೀಯ ವಿರೋಧಿಗಳು ಬಿಜೆಪಿ ದಲಿತ ವಿರೋಧಿ, ಡಾ.ಅಂಬೇಡ್ಕರರ ವಿರೋಧಿ, ಮೀಸಲಾತಿ ವಿರೋಧಿ ಎಂಬ ತಮ್ಮ ಸವಕಲು ಪ್ಲೇಟ್ ಹಾಕುತ್ತಲೇ ಇರುತ್ತಾರೆ. ಆ ಸವಕಲು ಗ್ರಾಮಾಫೋನ್ ತಿರುಗಿಸುವವರಲ್ಲಿ ಸಿದ್ದರಾಮಯ್ಯ ಅವರೂ ಒಬ್ಬರು. ಒಂದೋ ಪೂರ್ವಗ್ರಹಪೀಡಿತರಾಗಿ ಅಥವಾ ಸಾಫ್ಟ್‍ವೇರ್ ಅಪ್‍ಡೇಟ್ ಆಗದೆ ಹಳೇ ಗ್ರಾಮಾಫೋನ್ ಪ್ಲೇಟ್ ಹಾಕುತ್ತಿದ್ದಾರೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿತು. ಅಂಬೇಡ್ಕರ್ ಅವರ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಬಿಜೆಪಿ ಮಾಡಿದೆ. ಅವರ ಜನ್ಮಸ್ಥಾನ ಮಹುವಾ, ಅವರ ಕರ್ಮಭೂಮಿ ನಾಗಪುರ, ಅವರು ಓದಿದ ಸ್ಥಳದ ಅಭಿವೃದ್ಧಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಾರಣವಾಗಿದೆ. ದಿಲ್ಲಿಯ ಅವರ ವಾಸದ ಮನೆಯನ್ನು ಅಭಿವೃದ್ಧಿಪಡಿಸಿ ಅಂತರ್‍ರಾಷ್ಟ್ರೀಯ ಸ್ಮಾರಕ ನಿರ್ಮಿಸಿದ್ದು ಬಿಜೆಪಿ ಸರಕಾರವೇ ಎಂದು ಅವರು ವಿವರಿಸಿದರು.
ಜಾತಿ ಗಣತಿಗೆ ಕಾಂಗ್ರೆಸ್‍ನವರು 300 ಕೋಟಿ ರೂ.ಖರ್ಚು ಮಾಡಿದ್ದರು. ಅವರಿಗೆ ನಿಜವಾಗಿಯೂ ಬದ್ಧತೆ ಇದ್ದರೆ 2015ರಲ್ಲೇ ಸಿಕ್ಕಿದ ಜಾತಿ ಗಣತಿ ವರದಿಯನ್ನು ಹೊರ ತರಲಿಲ್ಲವೇಕೆ ಎಂದು ಪ್ರಶ್ನಿಸಿದ ಅವರು, ನೀವೇ ನೇಮಿಸಿದ ಸದಸ್ಯರು ಈ ಗಣತಿ ವರದಿಗೆ ವಿರೋಧ ಸೂಚಿಸಿದ್ದರು. ಇದು ನಿಮ್ಮ ಎಡಬಿಡಂಗಿತನ, ನಿಮ್ಮ ಗೋಸುಂಬೆತನ. ಕಾಂಗ್ರೆಸ್‍ನದ್ದು ರಾಜಕೀಯ ನಾಟಕವμÉ್ಟೀ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಾಜು ಗೌಡ ಉಪಸ್ಥಿತರಿದ್ದರು.







