ಹಿದಾಯ ಫೌಂಡೇಶನ್ ನಿಂದ 'ಕುಟುಂಬ ಶೈಕ್ಷಣಿಕ ದತ್ತು' ಯೋಜನೆಗೆ ಚಾಲನೆ
ಸಂಘ ಸಂಸ್ಥೆಗಳು ದೀರ್ಘಕಾಲದ ಶೈಕ್ಷಣಿಕ ಯೋಜನೆ ರೂಪಿಸಬೇಕು: ಎ.ಬಿ.ಇಬ್ರಾಹೀಂ

ಬಂಟ್ವಾಳ, ಆ.11: ಹಿದಾಯ ಫೌಂಡೇಶನ್ ಮಂಗಳೂರು ಇದರ ವತಿಯಿಂದ 'ಕುಟುಂಬ ಶೈಕ್ಷಣಿಕ ದತ್ತು ಯೋಜನೆ'ಗೆ ಚಾಲನಾ ಕಾರ್ಯಕ್ರಮ ಕಾವಳಕಟ್ಟೆಯ ಹಿದಾಯ ಶೇರ್ ಮತ್ತು ಕೇರ್ ಕಾಲೋನಿಯಲ್ಲಿ ಗುರುವಾರ ನಡೆಯಿತು.
ಯೋಜನೆಗೆ ಚಾಲನೆ ನೀಡಿದ ನಿವೃತ್ತ ಐ.ಎ.ಎಸ್. ಅಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಸಂಘ ಸಂಸ್ಥೆಗಳು ಫಲಾನುಭವಿಗಳಿಗೆ ಅಲ್ಪಾವಧಿಯ ನೆರವನ್ನು ನೀಡುವ ಬದಲು ಶೈಕ್ಷಣಿಕ ಉತ್ತೇಜನದ ಮೂಲಕ ದೀರ್ಘಾವಧಿಯ ಕಾರ್ಯಕ್ರಮ ಅನುಷ್ಟಾನಗೊಳಿಸಿ ಶಾಶ್ವತ ಸಬಲೀಕರಣಕ್ಕೆ ಪ್ರಯತ್ನಿಸಬೇಕು ಎಂದರು.
ಕುಟುಂಬದ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಇಡೀ ಕುಟುಂಬವನ್ನು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ಹಿದಾಯ ಫೌಂಡೇಶನ್ ನ ದೂರದೃಷ್ಟಿಯ ಈ ಯೋಜನೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶೈಕ್ಷಣಿಕ ತರಬೇತುದಾರ ರಫೀಕ್ ಮಾಸ್ಟರ್ ಮಾತನಾಡಿ, ನಾವು ಮಕ್ಕಳಿಗಾಗಿ ಸಂಪತ್ತು ಮಾಡುವ ಬದಲು ಮಕ್ಕಳನ್ನೇ ಸಂಪತ್ತನ್ನಾಗಿ ಮಾಡಬೇಕು. ಮಕ್ಕಳನ್ನು ನಮ್ಮ ಸಂಪತ್ತನ್ನಾಗಿ ಪರಿವರ್ತಿಸಲು ಶಿಕ್ಷಣ ಅತೀ ಮುಖ್ಯವಾಗಿದೆ ಎಂದರು.
ಹಸಿದವನಿಗೆ ಮೀನು ಕೊಟ್ಟರೆ ಅದು ಅವನ ಒಂದು ದಿನದ ಹಸಿವನ್ನು ನೀಗಿಸಬಹುದು. ಆದರೆ ಹಸಿದವನಿಗೆ ಮೀನು ಹಿಡಿಯುವುದನ್ನು ಕಲಿಸಿದರೆ ಅದು ಅವನ ಜೀವನ ಪೂರ್ತಿ ಹಸಿವನ್ನು ನೀಗಿಸಬಹುದು. ಇದೇ ಮಾದರಿಯಲ್ಲಿ ಇಂದು ಹಿದಾಯ ಫೌಂಡೇಶನ್ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ರೂಪಿಸಿದ ಈ ಯೋಜನೆ ಮಹತ್ವದ್ದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿದಾಯ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಲ್ತಮಜಲ್ ಮಾತನಾಡಿದರು. ವೇದಿಕೆಯಲ್ಲಿ ಹಿದಾಯ ಫೌಂಡೇಶನ್ ಅನಿವಾಸಿ ಸದಸ್ಯ ಮುಹಮ್ಮದ್ ಶಮೀಮ್, ಹಿದಾಯ ಫೌಂಡೇಶನ್ ಕೋಶಾಧಿಕಾರಿ ಝಿಯಾವುದ್ದೀನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 15 ಕುಟುಂಬಗಳಿಗೆ 'ಜ್ಞಾನ ಕಿಟ್' ಗಳನ್ನು ವಿತರಿಸಲಾಯಿತು. ಹಿದಾಯ ಫೌಂಡೇಶನ್ ನಿಂದ ಪ್ರತೀ ತಿಂಗಳು ಆಹಾರ ಸಾಮಗ್ರಿಗಳನ್ನು ವಿತರಿಸುವ 250 ಕುಟುಂಬಗಳನ್ನು ಸಮೀಕ್ಷೆ ನಡೆಸಿ ಅವುಗಳ ಪೈಕಿ ಅರ್ಹ 15 ಕುಟುಂಬಗಳನ್ನು ಆಯ್ಕೆ ಮಾಡಿ ಅವರ ಮಕ್ಕಳಿಗೆ ಸಂಪೂರ್ಣ ಶಿಕ್ಷಣ ಒದಗಿಸಲು 'ಕುಟುಂಬ ಶೈಕ್ಷಣಿಕ ದತ್ತು ಯೋಜನೆ' ರೂಪಿಸಲಾಗಿದೆ.
ಹಿದಾಯ ಫೌಂಡೇಶನ್ ಕಾರ್ಯಕ್ರಮ ಸಂಯೋಜಕ ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ ಪ್ರಸ್ತಾವಿಸಿ, ಸ್ವಾಗತಿಸಿದರು. ಹಿದಾಯ ಫೌಂಡೇಶನ್ ಆಡಳಿತ ಅಧಿಕಾರಿ ಆಬಿದ್ ಅಝ್ಗರ್ ಧನ್ಯವಾದಗೈದರು. ಮುಹಮ್ಮದ್ ತುಂಬೆ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.











