ಸಿ.ಟಿ.ರವಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ರಾಮಲಿಂಗಾರೆಡ್ಡಿ ಎಚ್ಚರಿಕೆ

ಬೆಂಗಳೂರು, ಆ. 12: `ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಮದ್ಯ ಸೇವಿಸಿ ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ.ರವಿ ಹಾಗೂ ಬಿಜೆಪಿಯವರ ಸಂಸ್ಕೃತಿ. ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ರಾಜ್ಯದಲ್ಲಿನ ಬಡವರಿಗಾಗಿ ಹಸಿವು ನೀಗಿಸಲು ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಮಾಡಲಾಗಿದೆ. ಆದರೆ ಸಿ.ಟಿ.ರವಿ ಅವರು ಇಂದಿರಾಗಾಂಧಿ ಅವರ ಹೆಸರಲ್ಲಿ ಹುಕ್ಕಾ ಬಾರ್ ಬೇಕಾದರೆ ಮಾಡಿಕೊಳ್ಳಲಿ ಎಂದು ಆಡಿರುವ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ' ಎಂದು ತಿರುಗೇಟು ನೀಡಿದರು.
`ಆಚಾರವಿಲ್ಲದ ನಾಲಿಗೆ ಎಂದು ಏನು ಬೇಕಾದರೂ ಮಾತನಾಡುವುದು ಸರಿಯಲ್ಲ. ಇಂದಿರಾ ಗಾಂಧಿ ಅವರ ಹೆಸರನ್ನು ಹೇಳುವ ಯೋಗ್ಯತೆ ಬಿಜೆಪಿ ನಾಯಕರಿಗಿಲ್ಲ. ಇವರಿಗೆ ಬದ್ಧತೆ ಇದ್ದರೆ ನಮ್ಮ ಆಡಳಿತಾವಧಿಯಲ್ಲಿ ರೂಪಿಸಿ ಅನುಷ್ಠಾನಗೊಳಿಸಿದ ಯೋಜನೆಗಳನ್ನು ಜಾರಿಗೆ ತರಲಿ. ಬಿಜೆಪಿ ಅವಧಿಯ ಒಂದೇ ಒಂದು ಜನಪ್ರಿಯ ಯೋಜನೆ ಹೆಸರು ಹೇಳಲಿ' ಎಂದು ರಾಮಲಿಂಗಾರೆಡ್ಡಿ ಸವಾಲು ಹಾಕಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, `ಸಿ.ಟಿ.ರವಿ ಅವರ ಮಾತುಗಳನ್ನು ಕೇಳಿದರೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತೆ ಕಾಣುತ್ತಿದೆ. ಅವರ ಭಾಷೆ ಬಳಕೆ ಇದಕ್ಕೆ ಸಾಕ್ಷಿ. ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಅವರ ಮಾತುಗಳು ಅವರ ಆಚಾರ-ವಿಚಾರವನ್ನು ತಿಳಿಸುತ್ತದೆ. ಮನಸೋ ಇಚ್ಛೆ ಮಾತನಾಡುವುದು ಬಿಜೆಪಿಯವರ ಸಂಸ್ಕøತಿಯಾಗಿದೆ' ಎಂದು ವಾಗ್ದಾಳಿ ನಡೆಸಿದರು.







