ಉಡುಪಿಯಲ್ಲಿ ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಉಡುಪಿ ಜಿಲ್ಲಾಸ್ಪತ್ರೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

ಉಡುಪಿ, ಆ.12: ರಾಜ್ಯದಲ್ಲಿ ಸರಕಾರಿ ಮೆಡಿಕಲ್ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಕಾಲೇಜು ಸ್ಥಾಪಿಸಲು ಸಾರ್ವಜನಿಕ ಖಾಸಗಿ ಪಾಲುದಾರಿಕೆ(ಪಿಪಿಪಿ) ಮಾದರಿಯಲ್ಲಿ ಹೊಸ ಯೋಜನೆ ರೂಪಿಸಲಾಗುತ್ತಿದೆ. ಅದರ ಮೊದಲ ಪಟ್ಟಿಯಲ್ಲಿ ಉಡುಪಿ ಜಿಲ್ಲೆಗೆ ಆದ್ಯತೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
250 ಹಾಸಿಗೆಗಳ ಉಡುಪಿ ಜಿಲ್ಲಾಸ್ಪತ್ರೆಯ ನೂತನ ಕಟ್ಟಡಕ್ಕೆ ಶಂಕು ಸ್ಥಾಪನೆಯನ್ನು ಗುರುವಾರ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಆವರಣದಲ್ಲಿ ನೆರವೇರಿಸಿ ಅವರು ಮಾತನಾಡುತಿದ್ದರು. ಉಡುಪಿಯಲ್ಲಿ ಪಿಪಿಪಿ ಮಾದರಿಯಲ್ಲಿ ಕಾಲೇಜು ನಿರ್ಮಿಸಲು ಬಹಳಷ್ಟು ಜನ ಮುಂದೆ ಬರಲಿದ್ದಾರೆ. ಅದಕ್ಕೆ ಜಾಗವನ್ನು ಕೂಡ ಈಗಾಗಲೇ ಗುರುತಿಸಲಾಗಿದೆ. ಆದಷ್ಟು ಬೇಗ ನಾನೇ ಬಂದು ಅದಕ್ಕೆ ಅಡಿ ಗಲ್ಲು ಹಾಕುವ ಕಾರ್ಯ ಮಾಡುತ್ತೇನೆ ಎಂದರು.
ಕೋವಿಡ್ ಒಂದು ಮತ್ತು ಎರಡನೇ ಅಲೆ ನಮ್ಮನ್ನು ಬಹಳಷ್ಟು ಸಂಕಷ್ಟಕ್ಕೀಡು ಮಾಡಿತ್ತು. ನಮ್ಮ ಬದುಕಿನ ದಿಕ್ಕನ್ನೇ ಬದಲಾವಣೆ ಮಾಡಿದೆ. ಇಂತಹ ಸವಾಲುಗಳನ್ನು ರಾಜ್ಯ ಸರಕಾರ ಸಮರ್ಥವಾಗಿ ನಿರ್ವಹಿಸಿದೆ. ಆರೋಗ್ಯ ಯಾವ ಹಂತದಲ್ಲಿ ತೊಂದರೆ ಕೊಡುತ್ತದೆ ಎಂಬುದು ನಮಗೆ ಕೋವಿಡ್ ಸಂದರ್ಭದಲ್ಲಿ ಮನವರಿಕೆಯಾಗಿದೆ. ಇಂತಹ ದೊಡ್ಡ ಸಾಂಕ್ರಾಮಿಕ ರೋಗವನ್ನು ಎದುರಿಸಲು ಕಷ್ಟವಾದರೂ ನಾವು ಎಲ್ಲವನ್ನು ಮಾಡಬಲ್ಲೆವು ಎಂಬುದನ್ನು ತೋರಿಸಿಕೊಟ್ಟಿ ದ್ದೇವೆ ಎಂದು ಅವರು ಹೇಳಿದರು.
ಒಂದೇ ವರ್ಷದಲ್ಲಿ 20ಸಾವಿರ ಹೊಸ ಆಕ್ಸಿಜನ್ ಬೆಡ್‌ಗಳನ್ನು ಹಾಗೂ 6ಸಾವಿರ ವೆಂಟೇಲರ್ ಬೆಡ್‌ಗಳ ವ್ಯವಸ್ಥೆ ಮಾಡಿದ್ದೇವೆ. ಆಕ್ಸಿಜನ್ ಕೊರತೆ ಅನುಭವಿಸಿದಾಗಲೂ ಉಡುಪಿಗೆ ಒಂದು ದಿನವೂ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ. ಸೌದಿ ಅರೇಬಿಯಾ, ದುಬೈಯಿಂದ ಬಂದ ಆಕ್ಸಿಜನ್‌ಗಳನ್ನು ಪಡೆದುಕೊಂಡಿದ್ದೇವೆ. ಪ್ರಸ್ತುತ ಬಹುತೇಕ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ದಿನಗದಳಲ್ಲಿ ಆಕ್ಸಿಜನ್ ಕೊರತೆ ಆಗದಂತೆ ಎಲ್ಲ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.
4000 ವೈದ್ಯರ ನೇಮಕ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಮೂರನೇ ಅಲೆಗೆ ಬೇಕಾದ ಎಲ್ಲ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ಸರಕಾರ ವಹಿಸಿಕೊಂಡಿದೆ. ಪ್ರತಿ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಕೃತಕ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸುವುದರ ಜೊತೆಗೆ ಆಕ್ಸಿಜನ್ ಶೇಖರಣೆ ಮಾಡುವ ಟ್ಯಾಂಕರ್‌ಗಳನ್ನು ಅಳವಡಿಸಲು ಸಿದ್ಧತೆ ಮಾಡ ಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 4000 ವೈದ್ಯರನ್ನು ನೇಮಕ ಮಾಡಿಕೊಳ್ಳುವ ಕಾರ್ಯ ಕಳೆದ ನಾಲ್ಕೈದು ತಿಂಗಳಲ್ಲಿ ಆಗಿದೆ. ನೇರ ನೇಮಕಾತಿ ಮೂಲಕ 1740 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸುಮಾರು 2000 ವೈದ್ಯರನ್ನು ಕಡ್ಡಾಯವಾಗಿ ಗ್ರಾಮೀಣ ಸೇವೆಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಚಿವ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಆಯುಕ್ತ ಡಾ.ತ್ರಿಲೋಕಚಂದ್ರ, ಜಿಪಂ ಸಿಇಓ ಡಾ.ನವೀನ್ ಭಟ್, ಮಂಗಳೂರು ಪಶ್ಛಿಮ ವಲಯ ಐಜಿಪಿ ದೇವಜ್ಯೋತಿ ರೇ, ಎಸ್ಪಿ ವಿಷ್ಣುವರ್ದನ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ವಾಗತಿಸಿದರು. ಜಿಲ್ಲಾ ಸರ್ಜನ್ ಡಾ.ಮಧು ಸೂದನ್ ನಾಯಕ್ ವಂದಿಸಿದರು. ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು.
ಬಿ.ಆರ್.ಶೆಟ್ಟಿ ಕಂಪೆನಿಗೆ 200 ಬೆಡ್‌ಗಳ ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮುಂದುವರೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದನ್ನು ಸರಕಾರ ವಹಿಸಿಕೊಳ್ಳುವ ಬಗ್ಗೆ ತಾತ್ವಿಕವಾಗಿ ಒಪ್ಪಿಕೊಂಡಿದ್ದೇವೆ. ಮುಂದಿನ ವಾರದೊಳಗೆ ಆದೇಶ ಹೊರಡಿಸಿ ಅದನ್ನು ಸರಕಾರವೇ ವಹಿಸಿಕೊಳ್ಳಲಿದೆ. ಈ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯಲಿದೆ. ಮುಂದೆ ಸಂಪೂರ್ಣವಾಗಿ ಆಸ್ಪತ್ರೆಯನ್ನು ಸರಕಾರ ವಹಿಸಿಕೊಂಡು ಈ ಭಾಗದ ಜನರ ಸೇವೆಗೆ ಅಣಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರೋಗ್ಯ ಉತ್ತಮವಾಗಿರಬೇಕಾಗದೆ ಒಳಚರಂಡಿ ವ್ಯವಸ್ಥೆ ಸರಿಯಾಗಿರಬೇಕು. ಸ್ವಚ್ಱತೆ ಎಂಬುದು ಬಹಳ ಮುಖ್ಯ. ಹೊರಗಡೆ ನೋಡುವಾಗ ಉಡುಪಿ ಸುಂದರವಾಗಿ ಕಾಣುತ್ತದೆ. ಅದಕ್ಕೆ ಒಳ್ಳೆಯ ಒಳಚರಂಡಿ ವ್ಯವಸ್ಥೆ ಕೂಡ ಅವಶ್ಯಕತೆ ಇದೆ. ಆದುದರಿಂದ ಉಡುಪಿ ನಗರಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ಕರ್ನಾಟಕ ಒಳಚರಂಡಿ ಅಭಿವೃದ್ದಿ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗುವುದು ಎಂದರು.
ಉಡುಪಿಯ ಜನ ಹೃದಯ ವೈಶ್ಯಾಲ ಹೊಂದಿದವರು. ಜಿಲ್ಲೆಗೆ ಬೇಕಾದನ್ನು ಬಿಟ್ಟು ತಮಗೆ ವೈಯಕ್ತಿಕವಾಗಿ ಏನು ಕೇಳದಿರುವ ಇಡೀ ರಾಜ್ಯದ ಏಕೈಕ ಜಿಲ್ಲೆ ಉಡುಪಿ. ಜಿಲ್ಲೆಯ ಸಂವೇದನಶೀಲತೆ, ಪ್ರೀತಿ, ವಿಶ್ವಾಸ, ಅಭಿವೃದ್ದಿ ಪರವಾದ ಚಿಂತನೆ ಶ್ಲಾಘನೀಯವಾದುದು. ಇಂತಹ ಜಿಲ್ಲೆಯಲ್ಲಿ ಕೆಲವು ದಿನ ಉಸ್ತುವಾರಿಯಾಗಿ ಕೆಲಸ ಮಾಡಿರುವುದು ನನ್ನ ಸೌಭಾಗ್ಯ. ಕೆಲವೇ ದಿನಗಳಲ್ಲಿ ನಿಮ್ಮ ಹೃದಯದಲ್ಲಿ ನನಗೆ ಶಾಶ್ವತ ಸ್ಥಾನವವನ್ನು ಕೊಟ್ಟಿದ್ದೀರಿ. ನನ್ನ ಜೀವನದ ಉದ್ದಕ್ಕೂ ಈ ಸಂಬಂಧವನ್ನು ನಾನು ಎಂದಿಗೂ ಮರೆಯುವುದಿಲ್ಲ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.








