ಉಡುಪಿ: 14ನೇ ಶತಮಾನದ ಶಾಸನೋಕ್ತ ಉಭಯಮುಖಿ ದಾನ ಶಿಲೆಗಳು ಪತ್ತೆ

ಉಡುಪಿ, ಆ.12: ಜಿಲ್ಲೆಯ ಕುಂದಾಪುರ ತಾಲೂಕಿನ ಕೈಲ್ಕೆರೆ, ಗುಡ್ಡೆಟ್ಟು, ಹಾರ್ಯಾಡಿ ಮತ್ತು ಕೊಳನ್ಕಲ್ಲು ಪ್ರದೇಶದಲ್ಲಿ ಒಟ್ಟು 5 ಶಾಸನೋಕ್ತ ಉಭಯಮುಖಿ ದಾನ ಶಿಲೆಗಳನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧ ನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಹಾಗೂ ರಾಜೇಶ್ವರ ಉಪಾಧ್ಯಾಯ ಕಂಚಾರ್ತಿ ಅವರು ಪತ್ತೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಇಂತಹ ಉಭಯಮುಖಿ ದಾನ ಶಿಲೆಗಳು ಪತ್ತೆಯಾಗಿರುವುದು ತೀರಾ ಅಪರೂಪ. ಇಲ್ಲಿ ಪತ್ತೆಯಾಗಿರುವ ಎಲ್ಲಾ ದಾನ ಶಿಲೆಗಳಲ್ಲೂ ಶಾಸನಗಳಿದ್ದು, ಅಲ್ಲಲ್ಲಿ ಅಳಿಸಿಹೋಗಿವೆ. ಗೋಚರಿಸುವ ಕೆಲವು ಲಿಪಿಯ ಆಧಾರದ ಮೇಲೆ ಇವುಗಳು 14ನೇ ಶತಮಾನಕ್ಕೆ ಸೇರಿದ ಶಾಸನಗಳೆಂದು ಅಂದಾಜಿಸಬಹುದಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಕಂಚಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಬಳಿ, ಕೊಳನ್ಕಲ್ಲು ಶ್ರೀ ಮಹಾಗಣಪತಿ ದೇವಾಲಯ ಸಮೀಪದ ಗದ್ದೆಯ ಬಳಿ, ಹಾರ್ಯಾಡಿ ಪುರಾಣಿಕರ ಮನೆಯ ಬಳಿ ಪತ್ತೆ ಮಾಡಲಾದ ದಾನ ಶಿಲೆಯ ಕೆಳಗಿನ ಪಟ್ಟಿಕೆಯು ಗುಡ್ಡೆಟ್ಟು ದೇವಾಲಯದ ಬಳಿಯಿರುವ ಪಟ್ಟಿಕೆಯ ರೀತಿಯಲ್ಲಿಯೇ ಇದ್ದು ಮೇಲ್ಭಾಗದಲ್ಲಿ ಮಾತ್ರ ಶಿವಲಿಂಗ ಹಾಗೂ ಇಕ್ಕೆಲಗಳಲ್ಲಿ ಕಾಲುದೀಪದ ಕೆತ್ತನೆಯಿದೆ. ಇತರೆಡೆ ಪತ್ತೆಯಾದ ಕೆಲವು ಶಾಸನಗಳ ಶಾಪಾಶಯದಲ್ಲಿ ‘ಉಭಯಮುಖಿಂ ಕೊಂದ ಪಾಪಂಮಕ್ಕುಂ’ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಪತ್ತೆಯಾದ ಅಪರೂಪದ ಈ ಉಭಯಮುಖಿ ದಾನ ಶಿಲೆಗಳು ಅಧ್ಯಯನ ದೃಷ್ಟಿಯಿಂದ ಇತಿಹಾಸಕ್ಕೆ ಹೊಸ ಬೆಳಕನ್ನು ಚೆಲ್ಲಲಿದೆ ಎಂದು ಸಂಶೋಧನಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಗುಡ್ಡೆಟ್ಟಿನ ಬಾಲಚಂದ್ರ ಅಡಿಗ ಸಹಕಾರ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.







