ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವನ್ನು ಖಚಿತಪಡಿಸಲು ಕಷ್ಟ: ಕೇಂದ್ರ ಸರಕಾರಕ್ಕೆ ತಿಳಿಸಿದ ಮನೀಶ್ ಸಿಸೋಡಿಯಾ

ಹೊಸದಿಲ್ಲಿ, ಆ. 12: ಸೂಕ್ತ ತನಿಖೆ ನಡೆಸದೆ ಕೋವಿಡ್ನ ಎರಡನೇ ಅಲೆಯ ಸಂದರ್ಭ ಆಮ್ಲಜನಕ ಕೊರತೆಯಿಂದ ಸಂಭವಿಸಿರುವ ಸಾವಿನ್ನು ಖಚಿತ ಪಡಿಸುವುದು ಕಷ್ಟಕರ ಎಂದು ತಿಳಿಸಿ ಕೇಂದ್ರದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಅವರಿಗೆ ತಾನು ಪತ್ರ ಬರೆದಿದ್ದೇನೆ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಗುರುವಾರ ಹೇಳಿದ್ದಾರೆ.
ಆಮ್ಲಜನಕದ ಕೊರತೆಯಿಂದ ಸಂಭವಿಸಿದ ಸಾವಿನ ಕುರಿತು ತನಿಖೆ ನಡೆಸಲು ಹಾಗೂ ವರದಿ ಸಿದ್ಧಪಡಿಸಲು ದಿಲ್ಲಿ ಸರಕಾರ ಸಮಿತಿಯೊಂದನ್ನು ರೂಪಿಸಿತ್ತು. ಇದರಿಂದ ಸಂತ್ರಸ್ತ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲು ಸಾಧ್ಯವಾಗಬಹುದಿತ್ತು ಎಂದು ಸಿಸೋಡಿಯಾ ಹೇಳಿದ್ದಾರೆ. ‘‘ಆದರೆ ಕೇಂದ್ರ ಸರಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ಸಮಿತಿ ರೂಪಿಸಲು ಅವಕಾಶ ನೀಡಿಲ್ಲ. ನಾವು ಸಮಿತಿ ರೂಪಿಸಲು ಅವಕಾಶ ನೀಡುವಂತೆ ಕೋರಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ
ಮತ್ತೊಮ್ಮೆ ಕಡತವನ್ನು ಕಳುಹಿಸಿದೆವು. ನಾವು ಜವಾಬ್ದಾರಿಯುತವಾಗಿ ತನಿಖೆ ನಡೆಸುತ್ತಿದ್ದೆವು ಹಾಗೂ ತಪ್ಪಿತಸ್ಥರನ್ನು ಶಿಕ್ಷಿಸಲಿದ್ದೆವು’’ ಎಂದು ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ. ಕೋವಿಡ್ ಸೋಂಕಿನಿಂದ ದಿಲ್ಲಿಯಲ್ಲಿ 25 ಸಾವಿರಕ್ಕೂ ಅಧಿಕ ಸಾವುಗಳು ದಾಖಲಾಗಿವೆ. ಎಪ್ರಿಲ್ ಹಾಗೂ ಮೇಯಲ್ಲಿ ಸಂಭವಿಸಿದ ಸಾವಿನ ಪ್ರಕರಣಗಳಿಗೂ ಆಮ್ಲಜನಕದ ಕೊರೆತೆಗೂ ಇರುವ ಸಂಬಂಧದ ಬಗ್ಗೆ ತನಿಖೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ‘‘ಆಮ್ಲಜನಕದ ಕೊರತೆ ಇಲ್ಲ ಎಂದು ನಾವು ಹೇಳಲಾರೆವು. ಆಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯ ಕುಟುಂಬಿಕರು ಆಮ್ಲಜನಕಕ್ಕಾಗಿ ಎಸ್ಒಎಸ್ ಸಂದೇಶ ಕಳುಹಿಸಿದ್ದಾರೆ’’ ಎಂದು ಮನೀಶ್ ಸಿಸೋಡಿಯಾ ಪತ್ರದಲ್ಲಿ ತಿಳಿಸಿದ್ದಾರೆ.





