ರಾಜ್ಯದಲ್ಲಿ 2023ರಲ್ಲಿ ಜೆಡಿಎಸ್‍ನಿಂದ ಮಿಷನ್ 123: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಆ.12: ರಾಜ್ಯದಲ್ಲಿ 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಮಿಷನ್ 123 ಅಡಿಯಲ್ಲಿ ಕೆಲಸ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಗುರುವಾರ ನಗರದ ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಲ್ಬರ್ಗಾ ಹಾಗೂ ಬಳ್ಳಾರಿ ಜಿಲ್ಲೆಯ ಕೆಲವು ಪ್ರಮುಖರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಈ ಬಗ್ಗೆ ಇವತ್ತು ಮುಖಂಡರ ಜೊತೆ ವಿಸ್ತøತವಾಗಿ ಚರ್ಚೆ ನಡೆಸಲಾಗಿದೆ ಎಂದರು.
ಗುಲ್ಬರ್ಗ ಮಹಾನಗರ ಪಾಲಿಕೆ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಹೈದರಾಬಾದ್ ಕರ್ನಾಟಕ ಭಾಗ ಮೊದಲಿನಿಂದಲೂ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಿರುವಂತದ್ದು. ಆದುದರಿಂದ, ಗುಲ್ಬರ್ಗ ಮಹಾನಗರ ಪಾಲಿಕೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಚರ್ಚೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಸದ್ಯದಲ್ಲಿಯೆ ಕಾರ್ಯಾಗಾರ ನಡೆಸಲಾಗುವುದು. ಹಾಲಿ ಶಾಸಕರನ್ನು ಹೊರತುಪಡಿಸಿ 100 ಕ್ಷೇತ್ರಗಳ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಈ ಕಾರ್ಯಾಗಾರ ಆಯೋಜಿಸಲಾಗುತ್ತಿದ್ದು, ಶೀಘ್ರದಲ್ಲೆ ಅದರ ಸ್ಥಳ ಹಾಗೂ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
ಈಗ ಆಡಳಿತರೂಢ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿದಾಗ ರಾಜ್ಯದಲ್ಲಿ ಯಾರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆದರೂ ಮಕ್ಕಳ ಆಟದಂತಹ ವಾತಾವರಣ ನಿರ್ಮಾಣವಾಗಿದೆ. ಖಾತೆಗಳ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಗಳು, ಬಿಜೆಪಿಯಂತಹ ಶಿಸ್ತಿನ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದಾಗ ಅಪಹಾಸ್ಯಕ್ಕೆ ಒಳಗಾಗುವ ವಾತಾವರಣ ಸೃಷ್ಟಿಯಾಗಿದೆ ಎಂದು ಅವರು ಹೇಳಿದರು.
ಇವತ್ತು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರೇ ‘ಕುಮಾರಣ್ಣ ಕಾಲದಲ್ಲಿ ನಮಗೆ ಗೌರವ ಸಿಗುತ್ತಿತ್ತು’ ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಪಕ್ಷದ ಸರಕಾರ ಇದ್ದರೂ ಕೆಲಸ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಆಂತರಿಕವಾಗಿ ಹಲವಾರು ಶಾಸಕರಲ್ಲಿ ಇದೇ ಭಾವನೆಯಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಬಿಜೆಪಿ ಸರಕಾರ ರಕ್ಷಣೆ ಪಡೆಯಲು ಜೆಡಿಎಸ್ ಪಕ್ಷದ ಗುಮ್ಮವನ್ನು ಎದುರು ಇಡುತ್ತಿರುವುದನ್ನು ಗಮನಿಸಿದ್ದೇನೆ. ಜೆಡಿಎಸ್ ಪಕ್ಷವನ್ನು ಮುಗಿಸೇ ಬಿಟ್ಟಿದ್ದೇವೆ ಎಂದು ಹೇಳಿಕೊಂಡವರೆಲ್ಲ ಈಗ ಜೆಡಿಎಸ್ ಪಕ್ಷದ ನೆರಳು ಪಡೆಯುವಂತಹ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ನಾಗರಿಕರು ಕಾವೇರಿ ನೀರು ಕುಡಿಯುತ್ತಿರುವುದು ದೇವೇಗೌಡರ ಕೊಡುಗೆ. ಆದರೆ, ಬೆಂಗಳೂರು ನಾಗರಿಕರು, ಉತ್ತರ ಕರ್ನಾಟಕದ ನಾಗರಿಕರು ಕಾಂಗ್ರೆಸ್, ಬಿಜೆಪಿಗೆ ಮತ ನೀಡುತ್ತಾರೆ. ಜೆಡಿಎಸ್ ಅನ್ನು ಮರೆಯುತ್ತಾರೆ. ನಾಗರಿಕರು ನಿಮ್ಮ ಶಕ್ತಿ ಎಲ್ಲಿದೆ ಎಂದು ನೀವು ಗುರುತಿಸದಿದ್ದರೆ ಇಂತಹ ಅರಾಜಕತೆ ಮುಂದುವರೆಯುತ್ತಲೆ ಇರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಮೇಕೆದಾಟು ವಿಚಾರದ ಕುರಿತು ಸಿ.ಟಿ.ರವಿ ಹೇಳಿಕೆಯನ್ನು ಉಲ್ಲೇಖಿಸಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭಾರತೀಯರು ಎಂದು ಹೇಳಿಕೊಳ್ಳಲು ಬಿಜೆಪಿ ಪಕ್ಷದವರಿಗೆ ಮಾತ್ರ ಗುತ್ತಿಗೆ ಕೊಟ್ಟಿಲ್ಲ. ನಾವೇನು ಪಾಕಿಸ್ತಾನದವರೋ, ಚೀನಾದವರೋ ಅಥವಾ ಅಮೆರಿಕಾದವರೋ? ನಾನು ಭಾರತೀಯ ಅನ್ನೋದಕ್ಕಿಂತ ಮುಂಚೆ ಕನ್ನಡಿಗ. ಮೊದಲು ನಾನು ನನ್ನ ತಾಯಿಯನ್ನು ಉಳಿಸಿಕೊಳ್ಳಬೇಕು. ನನ್ನ ತಾಯಿ ಉಳಿದರೆ ತಾನೇ ಭಾರತ ಮಾತೆ ಉಳಿಯೋದು. ಮೇಕೆದಾಟು ವಿಚಾರದಲ್ಲಿ ಬಿಜೆಪಿ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದರು.







