ಭವಿಷ್ಯದಲ್ಲಿ ನನಗೆ ಉನ್ನತ ಹುದ್ದೆ ಸಿಗುವ ನಿರೀಕ್ಷೆ: ಬಿ.ವೈ. ವಿಜಯೇಂದ್ರ

ಕಲಬುರಗಿ, ಆ. 12: `ನಾನು ಈ ಸರಕಾರದಲ್ಲಿ ಡಿಸಿಎಂ ಅಥವಾ ಸಚಿವ ಸ್ಥಾನ ಸೇರಿದಂತೆ ಯಾವುದೇ ಆಕಾಂಕ್ಷಿಯಲ್ಲ. ಸದ್ಯಕ್ಕೆ ನನಗೆ 45 ವರ್ಷ. ಮುಂದಿನ ದಿನಗಳಲ್ಲಿ ನನಗೆ ಪಕ್ಷದಲ್ಲಿ ಉನ್ನತ ಹುದ್ದೆ ದೊರೆಯುವ ಸಾಧ್ಯತೆಗಳಿವೆ. ಹೀಗಾಗಿ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ' ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಸ್ಥಾನ ಕೊಡಿಸಲು ನನ್ನ ತಂದೆ ಯಡಿಯೂರಪ್ಪನವರು ಯಾವುದೇ ಒತ್ತಡವನ್ನು ಹೇರಿಲ್ಲ ಎಂದರು. ಖಾತೆ ಹಂಚಿಕೆ ವಿಚಾರಕ್ಕೆ ಕೆಲ ಸಚಿವರು ಅಸಮಾಧಾನಗೊಂಡಿರುವುದು ನಿಜ. ಆದರೆ, ಅದನ್ನು ವರಿಷ್ಠರು ಹಾಗೂ ಸಿಎಂ ಪರಿಹರಿಸಲಿದ್ದಾರೆ. ಪಕ್ಷದಲ್ಲಿ ಮೂಲ-ವಲಸಿಗರು ಎಂಬ ಯಾವುದೇ ಭೇದ-ಭಾವ ಇಲ್ಲ ಎಂದರು.
ಸಚಿವ ಸ್ಥಾನ: ಅತ್ಯಂತ ದೊಡ್ಡ ಜಿಲ್ಲೆ ಕಲಬುರ್ಗಿಯಲ್ಲಿ ಐದು ಮಂದಿ ಬಿಜೆಪಿ ಶಾಸಕರಿದ್ದರೂ ಸಚಿವ ಸ್ಥಾನ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಆದ್ಯತೆ ದೊರೆಯಲಿದೆ. ಈ ಸಂಬಂಧ ಸಿಎಂ ಹಾಗೂ ಪಕ್ಷದ ಅಧ್ಯಕ್ಷರಿಗೆ ಮನವಿ ಮಾಡಲಾಗುವುದು ಎಂದ ಅವರು, ಆಯೋಗವು ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಿಸಿದೆ. ಈ ಹಂತದಲ್ಲಿ ಮತ್ತೆ ಮುಂದೂಡಬೇಕು ಎಂದು ಹೇಳಲಾಗುವುದಿಲ್ಲ. ಯುದ್ಧ ಬಂದಿದೆ. ಅದಕ್ಕಾಗಿ ಸಿದ್ಧರಾಗಲೇಬೇಕು. ನಗರದಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದರು.
ವಿಜಯೇಂದ್ರ ಸಭೆಗೆ ಜಿಲ್ಲೆಯ ಬಿಜೆಪಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ ಅವರು ಗೈರು ಹಾಜರಾಗಿದ್ದರು. ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕರಲ್ಲಿ ಅಸಮಾಧಾನವಿದೆ. ಹೀಗಾಗಿ ಸಭೆಗೆ ಶಾಸಕರು ಗೈರು ಹಾಜರಾಗಿದ್ದಾರೆಂದು ಹೇಳಲಾಗುತ್ತಿದೆ.







