ಪೋಷಕರು ಮಕ್ಕಳ ಕುರಿತು ಕಾಳಜಿ ವಹಿಸಬೇಕು: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ

ಬೆಂಗಳೂರು, ಆ.12: ಮಕ್ಕಳಿಗೆ ಲಸಿಕೆ ಹಾಕುವವರೆಗೂ ಪೋಷಕರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು. ಜತೆಗೆ, ಕಾಳಜಿ ವಹಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸಲಹೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಇದುವರೆಗೂ ಲಸಿಕೆ ನೀಡಿಲ್ಲ. ಲಸಿಕೆ ನೀಡುವ ಕುರಿತು ರಾಜ್ಯ ಸರಕಾರ, ಆರೋಗ್ಯ ತಜ್ಞರು ಚರ್ಚೆ ನಡೆಸುತ್ತಿದ್ದಾರೆ. ಹೀಗಾಗಿ, ಲಸಿಕೆ ತಲುಪುವವರೆಗೂ ಪೋಷಕರು ತಪ್ಪದೆ, ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದರು.
ಮಕ್ಕಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಳೆದ ವರ್ಷದಂತೆ ಅಷ್ಟೇ ಪ್ರಮಾಣದಲ್ಲಿ ಕಂಡು ಬರುವ ಸಾಧ್ಯತೆ ಇದೆ ಎಂದ ಅವರು, ಎಲ್ಲ ವಯಸ್ಸಿನವರಲ್ಲಿ ಕೋವಿಡ್ ಸೋಂಕು ಕಡಿಮೆ ಆಗಬೇಕು ಎನ್ನುವ ಉದ್ದೇಶದಿಂದ ಬಿಬಿಎಂಪಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದರು.
ಶುಕ್ರವಾರದಿಂದ ಸರಣಿ ಹಬ್ಬಗಳು, ರಜೆ ದಿನಗಳು ಇರುವ ಹಿನ್ನೆಲೆ ಬೆಂಗಳೂರು ವ್ಯಾಪ್ತಿಯಲ್ಲಿ ವಲಯವಾರು ಅಧಿಕಾರಿಗಳನ್ನು ನೇಮಿಸಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ಕ್ರಮವಹಿಸುವಂತೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು







