ಶಾಸಕರ ಅನುದಾನ ಬಿಡುಗಡೆ: ಸಭಾಪತಿ ಹೊರಟ್ಟಿ ನೇತೃತ್ವದಲ್ಲಿ ಸಮಿತಿ ಸಭೆ

ಬೆಂಗಳೂರು, ಆ. 12: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಬಿಡುಗಡೆಗೊಂಡಿರುವ ಅನುದಾನ ಬಿಡುಗಡೆ ಕುರಿತು ವಿಧಾನ ಪರಿಷತ್ತಿನ ಐದು ಜನ ಸದಸ್ಯರ ಸಮಿತಿ ಸಭೆ ಸಭಾಪತಿ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ ನಾಳೆ(ಆ.13) ಶುಕ್ರವಾರ ನಡೆಯಲಿದೆ.
ಬೆಂಗಳೂರಿನಲ್ಲಿ ನಡೆದ ವಿಧಾನ ಪರಿಷತ್ತಿನ ಎಲ್ಲ ಸದಸ್ಯರ ಸಭೆಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ ಎಂಬುದಾಗಿ ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಸರಕಾರದ ಮಟ್ಟದಲ್ಲಿ ಕ್ರಮ ಕೈಕೊಳ್ಳುವಂತೆ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಯೋಜನಾ ಮತ್ತು ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯೂ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಹೊರಟ್ಟಿಯವರು ಸಭೆಯಲ್ಲಿ ಸೂಚನೆ ನೀಡಿದ್ದರು ಹಾಗೂ ಆ.14 ರೊಳಗಾಗಿ ಶಾಸಕರಿಗೆ ಅನುದಾನ ಬಿಡಗಡೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಭಾಪತಿಗಳು ಎಲ್ಲ ಸದಸ್ಯರಿಗೆ ಭರವಸೆ ನೀಡಿದ್ದರು.
ಅನುದಾನ ಬಿಡುಗಡೆಗೆ ಆಡಳಿತಾತ್ಮಕ ಅಡ್ಡಿ ಆತಂಕಗಳು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಸಿಎಂಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಐದು ಜನ ವಿವಿಧ ಪಕ್ಷಗಳ ಹಿರಿಯ ಸದಸ್ಯರಾದ ಕೆ.ಸಿ.ಕೊಂಡಯ್ಯ, ಎಸ್.ರವಿ, ತೇಜಸ್ವಿನಿ ಗೌಡ, ನಿರಾಣಿ ಹಣಮಂತ ರುದ್ರಪ್ಪ, ಅಪ್ಪಾಜಿಗೌಡ ಅವರನ್ನೊಳಗೊಂಡ ಸಮಿತಿ ನೇಮಿಸಲಾಗಿದೆ.
ಈ ಸಭೆಯಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗೆ ಶೇ.75ರಷ್ಟು ಅನುದಾನ ವೆಚ್ಚವಾಗಬೇಕು ಎಂಬ ಶರತ್ತುಗಳಿಂದ ವಿನಾಯತಿ ನೀಡುವುದು, ಪ್ರತಿವರ್ಷ ಜೂನ್ ತಿಂಗಳ ಅಂತ್ಯದವರೆಗಿನ ಕಡ್ಡಾಯವಾಗಿ ಎಲ್ಲ ಶಾಸಕರು 2 ಕೋಟಿ ರೂ.ಗಳ ಕಾಮಗಾರಿಗಳನ್ನು ನೀಡುವ ಬಗ್ಗೆ, ಎಸ್‍ಸಿಪಿ/ಟಿಎಸ್‍ಪಿ ಅನುದಾನವನ್ನು ಕಡ್ಡಾಯವಾಗಿ ಖರ್ಚು ಮಾಡುವ ಕುರಿತಂತೆ ಇನ್ನೂ ಹಲವು ವಿಷಯಗಳ ಬಗ್ಗೆ ಸವಿಸ್ತಾರ ಚರ್ಚೆ ನಡೆಯಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.







