ಕಂದಹಾರ್ ನಗರ ತಾಲಿಬಾನ್ ವಶ

ಫೈಲ್ ಫೋಟೋ (PTI)
ಕಂದಹಾರ್, ಆ.13: ಹಲವು ದಿನಗಳ ಭೀಕರ ಕದನದ ಬಳಿಕ ಅಫ್ಘಾನಿಸ್ತಾನದ ಎರಡನೇ ಅತಿದೊಡ್ಡ ನಗರ ಮತ್ತು ತಾಲಿಬಾನ್ ಸಂಘಟನೆ ಹುಟ್ಟಿಕೊಂಡ ಕಂದಹಾರ್ ನಗರವನ್ನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.
"ಕಂದಹಾರ್ ನಗರವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ. ಮುಜಾಹಿದ್ದೀನ್, ನಗರದ ಹುತಾತ್ಮರ ಚೌಕವನ್ನು ತಲುಪಿದೆ" ಎಂದು ತಾಲಿಬಾನ್ ವಕ್ತಾರರೊಬ್ಬರು ಟ್ವೀಟ್ ಮಾಡಿದ್ದಾರೆ. ಸರ್ಕಾರಿ ಪಡೆಗಳು ನಗರದ ಹೊರವಲಯದಲ್ಲಿರುವ ಮಿಲಿಟರಿ ವ್ಯವಸ್ಥೆಗೆ ಹಿಂದೆ ಸರಿದಿವೆ ಎಂದು ಸ್ಥಳೀಯ ನಿವಾಸಿಯೊಬ್ಬರು ಸ್ಪಷ್ಟಪಡಿಸಿದ್ದಾರೆ ಎಂದು ಎಎಫ್ಪಿ ವರದಿ ಮಾಡಿದೆ.
ಕಾಬೂಲ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರಲು ಪಡೆ ಕಳುಹಿಸುವುದಾಗಿ ಅಮೆರಿಕ ಹೇಳಿಕೆ ನೀಡಿತ್ತು. ಮುಂದಿನ 24ರಿಂದ 48 ಗಂಟೆ ಅವಧಿಯಲ್ಲಿ 3,000 ಮಂದಿಯ ಪಡೆಯನ್ನು ಕಾಬೂಲಿಗೆ ನಿಯೋಜಿಸಲಾಗುವುದು. ಇದನ್ನು ತಾಲಿಬಾನ್ ವಿರುದ್ಧ ದಾಳಿ ಮಾಡಲು ಬಳಸುತ್ತಿಲ್ಲ. ರೂಪುಗೊಳ್ಳುತ್ತಿರುವ ಭದ್ರತಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾಬೂಲಿನಲ್ಲಿ ನಮ್ಮ ನಾಗರಿಕ ಗುರುತನ್ನು ಮತ್ತಷ್ಟು ಕಡಿಮೆ ಮಾಡಲು ನಾವು ಬಯಸಿದ್ದೇವೆ ಎಂದು ಅಮೆರಿಕದ ರಕ್ಷಣಾ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.
ದೇಶದ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವ ಉದ್ದೇಶದಿಂದ 600 ಮಂದಿಯ ಪಡೆಯನ್ನು ಕಾಬೂಲಿಗೆ ಕಳುಹಿಸಲಾಗುತ್ತಿದೆ ಎಂದು ಬ್ರಿಟನ್ನ ರಕ್ಷಣಾ ಕಾರ್ಯದರ್ಶಿ ಬೆನ್ ವೆಲ್ಲೇಸ್ ಹೇಳಿದ್ದಾರೆ.
ಕಂದಹಾರ್ ವಶಪಡಿಸಿಕೊಂಡಿರುವುದು ತಾಲಿಬಾನ್ಗೆ ಸಿಕ್ಕ ದೊಡ್ಡ ಯಶಸ್ಸು ಎಂದು ಎಪಿ ಸುದ್ದಿಸಂಸ್ಥೆ ಅಭಿಪ್ರಾಯಪಟ್ಟಿದೆ. ಈ ಉಗ್ರ ಗುಂಪು ಅಪ್ಘಾನಿಸ್ತಾನದ 34 ಪ್ರಾಂತೀಯ ರಾಜಧಾನಿಗಳ ಪೈಕಿ 12ನ್ನು ಈಗಾಗಲೇ ವಶಪಡಿಸಿಕೊಂಡಿದೆ. ಕೆಲ ದಿನಗಳಿಂದ ಮಾರಕ ದಾಳಿ ಮುಂದುವರಿಸಿದೆ.
ಅಮೆರಿಕದ ಸೇನಾ ಗುಪ್ತಚರ ವಿಭಾಗದ ಅಂದಾಜಿನಂತೆ ಮುಂದಿನ 30 ದಿನಗಳ ಒಳಗಾಗಿ ಕಾಬೂಲ್ ಕೂಡಾ ತಾಲಿಬಾನ್ ವಶವಾಗುವ ಸಾಧ್ಯತೆ ಇದೆ. ಮುಂದಿನ ಕೆಲ ತಿಂಗಳುಗಳಲ್ಲಿ ಇಡೀ ದೇಶವನ್ನು ನಿಯಂತ್ರಣಕ್ಕೆ ಪಡೆಯಲಿದೆ. ಅಮೆರಿಕ ಮತ್ತು ನ್ಯಾಟೊ ಪಡೆಗಳ ಸೇನಾ ವಾಪಸ್ಸಾತಿ ಈ ತಿಂಗಳು ಕೊನೆಗೊಳ್ಳಲಿದ್ದು, ದೇಶದ ಬಹುತೇಕ ಭಾಗ ತಾಲಿಬಾನ್ ನಿಯಂತ್ರಣಕ್ಕೆ ಬರಲಿದೆ.







