ತಲಪಾಡಿ ಗಡಿಯಲ್ಲಿ ಪ್ರತಿಭಟನೆ: ಚೆಕ್‌ಪೋಸ್ಟ್ ಭೇಟಿ ರದ್ದುಗೊಳಿಸಿದ ಸಿಎಂ

ಮಂಗಳೂರು, ಆ.13: ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವವರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಿದ ರಾಜ್ಯ ಸರಕಾರದ ಆದೇಶವನ್ನು ಖಂಡಿಸಿ ತಲಪಾಡಿ ಗಡಿಯಲ್ಲಿ ಕೇರಳದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆಯೂ ಪ್ರತಿಭಟನೆ ನಡೆದಿದೆ.
ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ತಲಪಾಡಿ ಚೆಕ್‌ಪೋಸ್ಟ್ ಭೇಟಿ ನೀಡಿ ಪರಿಶೀಲನೆ ನಡೆಸುವ ಅಧಿಕೃತ ಕಾರ್ಯಕ್ರಮವನ್ನು ರದ್ದುಗೊಳಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮುಖ್ಯಮಂತ್ರಿಯು ಸಾರ್ವಜನಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಭೇಟಿಯನ್ನು ರದ್ದುಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಶುಕ್ರವಾರ ಬೆಳಗ್ಗೆ ಮಂಜೇಶ್ವರ ಪಂಚಾಯತ್ ಯುಡಿವೈಎಫ್ ಸಮಿತಿಯ ನೇತೃತ್ವದಲ್ಲಿ ಕಪ್ಪುಮಾಸ್ಕ್ ಧರಿಸಿ ಪ್ರತಿಭಟನೆ ನಡೆಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ತಲಪಾಡಿ ಗಡಿ ಪ್ರದೇಶಕ್ಕೆ ಭೇಟಿ ನೀಡುವ ಅಧಿಕೃತ ಕಾರ್ಯಕ್ರಮವಿತ್ತು. ಗುರುವಾರ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ್ದ ಅವರು ಗುರುವಾರ ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದರು. ಈ ಮಧ್ಯೆ ಪ್ರತಿಭಟನೆಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಯು ಗುರುವಾರ ರಾತ್ರಿ ಉಡುಪಿಯಲ್ಲೇ ವಾಸ್ತವ್ಯ ಹೂಡಿದ್ದು, ಶುಕ್ರವಾರ ಬೆಳಗ್ಗೆ ಉಡುಪಿಯಿಂದ ಮಂಗಳೂರಿಗೆ ಆಗಮಿಸಿ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಮುಖ್ಯಮಂತ್ರಿಯ ಭೇಟಿ ರದ್ದಾದರೂ ಕೂಡ ತಲಪಾಡಿ ಗಡಿಯಲ್ಲಿ ಯುಡಿವೈಎಫ್ ಕಾರ್ಯಕರ್ತರು ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿ, ಎರಡು ಡೋಸ್ ವ್ಯಾಕ್ಸಿನ್ ಪಡೆದುಕೊಂಡವರಿಗೆ ಕೇಂದ್ರ ಸರಕಾರದ ಆದೇಶದಂತೆ ಕರ್ನಾಟಕ ಪ್ರವೇಶಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹರ್ಷಾದ್ ವರ್ಕಾಡಿ, ಸೈಫುಲ್ಲಾ ತಂಙಳ್, ಸಿದ್ದೀಕ್ ಮಂಜೇಶ್ವರ, ಮುಸ್ತಫ ಉದ್ಯಾವರ, ಇಲ್ಯಾಸ್ ಕುಂಜತ್ತೂರು, ಅಬ್ದುಲ್ಲತೀಫ್ ಬಾಬ, ಪುತ್ತುಚ್ಙ, ಮುಬಾರಕ್ ಗುಡ್ಡೆಕೇರಿ, ರಿಯಾಝ್ ಮೊದಲಾದವರು ಪಾಲ್ಗೊಂಡಿದ್ದರು.







