ಕುಸ್ತಿ ಕಣಕ್ಕೆ ಯಾವಾಗ ಮರಳುತ್ತೇನೆಂದು ಗೊತ್ತಿಲ್ಲ ಎಂದ ವಿನೇಶ್ ಫೋಗಟ್

ಹೊಸದಿಲ್ಲಿ: ತನ್ನ ಟೋಕಿಯೊ ಒಲಿಂಪಿಕ್ಸ್ ಅಭಿಯಾನದ ನಿರಾಶೆಯಿಂದ ಹೊರಬರಲು ಹೆಣಗಾಡುತ್ತಿರುವ ಭಾರತದ ಕುಸ್ತಿ ತಾರೆ ವಿನೇಶ್ ಫೋಗಟ್ ಯಾವಾಗ ಕುಸ್ತಿ ಕಣಕ್ಕೆ ಮರಳುತ್ತೇನೆಂಬ ಕುರಿತು ಖಚಿತತೆ ಇಲ್ಲ ಎಂದಿದ್ದಾರೆ.
ರಿಯೊದಲ್ಲಿ ಮೊಣಕಾಲು ನೊಂದಿಗೆ ನಿರಾಸೆ ಕಂಡಿದ್ದ ವಿನೇಶ್ ಐದು ವರ್ಷಗಳ ನಂತರ, ಟೋಕಿಯೊದಲ್ಲಿ ನಡೆದ ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 26 ವರ್ಷ ವಯಸ್ಸಿನ ವಿನೇಶ್ ಅಗ್ರ ಶ್ರೇಯಾಂಕ ಪಡೆದಿದ್ದರು. ಆದರೆ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಬೆಲಾರಸ್ ನ ವನೇಸಾ ಕಲಾಡ್ಜಿನ್ಸ್ಕಯಾ ವಿರುದ್ಧ ಆಘಾತಕಾರಿ ಸೋಲನುಭಸಿದರು. ಜಪಾನ್‌ನಿಂದ ಹಿಂದಿರುಗಿದ ನಂತರ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಫೋಗಟ್ ಅವರ ಮೇಲೆ "ಅಶಿಸ್ತಿನ" ಆರೋಪ ಹೊರಿಸಿ ಅಮಾನತುಗೊಳಿಸಿದೆ.
"ಭಾರತದಲ್ಲಿ ನೀವು ಒಂದು ಪದಕ ಕಳೆದುಕೊಂಡರೆ ಏರಿದಷ್ಟೇ ವೇಗವಾಗಿ ಬೀಳುತ್ತೀರಿ ಎಂದು ನನಗೆ ತಿಳಿದಿತ್ತು ಹಾಗೂ ಎಲ್ಲವೂ ಮುಗಿದಿದೆ. ನಾನು ಯಾವಾಗ (ಕುಸ್ತಿ ಮ್ಯಾಟ್ ಗೆ) ಹಿಂದಿರುಗುವೆನೆಂದು ನನಗೆ ಗೊತ್ತಿಲ್ಲ. ಬಹುಶಃ ನಾನು ಮರಳುವುದಿಲ್ಲ. ಮುರಿದ ಕಾಲಿನಿಂದ ನಾನು ಚೇತರಿಸಿಕೊಂಡಿದ್ದೇನೆ ಎಂದು ನನಗೆ ಅನಿಸುತ್ತದೆ. ಈಗ ನಾನು ದೈಹಿಕವಾಗಿ ಸಮರ್ಥಳಾಗಿದ್ದರೂ ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ’’ಎಂದರು.
2017 ರಲ್ಲಿ ಗಾಯವಾದ ನಂತರದ ಪರಿಣಾಮಗಳನ್ನು ಅನುಭವಿಸುತ್ತಲೇ ಇದ್ದೆ ಹಾಗೂ ಟೋಕಿಯೊಗೆ ತಯಾರಿ ನಡೆಸುವ ಹಾದಿಯಲ್ಲಿ ಎರಡು ಬಾರಿ ಕೋವಿಡ್ -19 ಗೆ ತುತ್ತಾದೆ ಎಂದು ಫೋಗಟ್ ಹೇಳಿದರು.
ಎರಡು ಬಾರಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿರುವ ಫೋಗಟ್ ಮಾನಸಿಕ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಿದ್ದಾರೆ ಹಾಗೂ ಮನಶ್ಶಾಸ್ತ್ರಜ್ಞರೊಂದಿಗೆ ಮಾತನಾಡಿದ್ದರು. ಆದರೆ ಭಾರತದಲ್ಲಿ ಈ ಸಮಸ್ಯೆಯ ಬಗ್ಗೆ ಸಾಕಷ್ಟು ಗಮನ ಹರಿಸಿಲ್ಲ ಎಂದು ಹೇಳಿದ್ದಾರೆ.







