ಇಂದಿರಾ ಕ್ಯಾಂಟಿನ್ ಹೆಸರಿನಲ್ಲಿ ಕಾಂಗ್ರೆಸ್ ವ್ಯಾಪಕ ಭ್ರಷ್ಟಾಚಾರ ನಡೆಸಿದೆ: ಸಿ.ಟಿ.ರವಿ ಆರೋಪ

ಚಿಕ್ಕಮಗಳೂರು, ಆ.13: ಪಕ್ಷ ರಾಜಕಾರಣ ಹಾಗೂ ಭ್ರಷ್ಟಾಚಾರ ಮಾಡುವ ಉದ್ದೇಶದಿಂದಲೇ ಕಾಂಗ್ರೆಸ್ ಪಕ್ಷದವರು ಇಂದಿರಾ ಕ್ಯಾಂಟಿನ್ ಆರಂಭಿಸಿದ್ದಾರೆ. ಇಂದಿರಾ ಕ್ಯಾಂಟಿನ್ ಮೂಲಕವೇ ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಆರೋಪ ಮಾಡಿದ್ದಾರೆ.
ಶುಕ್ರವಾರ ಸಣ್ಣ ನೀರಾವರಿ ಇಲಾಖೆ ವತಿಯಿಂದ ತಾಲೂಕಿನ ಅಯ್ಯನಕೆರೆಯಲ್ಲಿ ಹಮ್ಮಿಕೊಂಡಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಆರಂಭಿಸಿರುವ ಇಂದಿರಾ ಕ್ಯಾಂಟಿನ್ ಯೋಜನೆಯ ಮುಖ್ಯ ಉದ್ದೇಶವೇ ರಾಜಕಾರಣ ಮಾಡುವುದಾಗಿದೆ. ಬಡವರ ಹೆಸರಿನಲ್ಲಿ ದುಡ್ಡು ಹೊಡೆಯಲು ಈ ಯೋಜನೆಯನ್ನು ರೂಪಿಸಲಾಗಿದೆ. ಈ ಕಾರಣಕ್ಕೆ ಈ ಯೋಜನೆಗೆ ಇಂದಿರಾ ಕ್ಯಾಂಟಿನ್ ಬದಲಾಗಿ ಅನ್ನಕ್ಕೆ ಅಧಿದೇವತೆಯಾದ ಅನ್ನಪೂರ್ಣೇಶ್ವರಿ ಹೆಸರಿಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದವರು ಇಂದಿರಾ ಗಾಂಧಿ ಹೆಸರಿನಲ್ಲಿ ರಾಜಕಾರಣ ಮಾಡಲು ಇಂದಿರಾ ಕ್ಯಾಂಟಿನ್‍ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಯೋಜನೆ ಹೆಸರಿನಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರವನ್ನೂ ಕಾಂಗ್ರೆಸ್‍ನವರು ನಡೆಸಿದ್ದಾರೆ ಎಂದು ಆರೋಪಿಸಿದರು.
ಇಂದಿರಾ ಕ್ಯಾಂಟಿನ್ ವಿಚಾರ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕಾಂಗ್ರೆಸ್‍ನಲ್ಲಿ ಜವಹರಲಾಲ್ ವ್ಯಕ್ತಿತ್ವ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತು. ನೆಹರು ಹುಕ್ಕಾ ಸೇವನೆ ಮಾಡುತ್ತಿದ್ದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಲಿ ನೋಡೋಣ ಎಂದು ಸವಾಲು ಹಾಕಿದರು.
ನಾನು ಕುಡುಕನಲ್ಲ. ಮದ್ಯಪಾನ ಮಾಡುವ, ಸಿಗರೇಟು ಸೇದುವ ಚಟ ನನಗಿಲ್ಲ. ನಾನು ಸಭ್ಯ ರಾಜಕಾರಣ ಮಾಡಿಕೊಂಡು ಬಂದವನು. ಮೈಸೂರು ಗೆಸ್ಟ್‍ಹೌಸ್‍ನಲ್ಲಿ ಕಾಂಗ್ರೆಸ್‍ನವರು ಏನೇನು ಮಾಡಿದ್ದಾರೆಂದು ಬಿಚ್ಚಿಡಲಾ? ಎಂದು ಇದೇ ವೇಳೆ ಸಿ.ಟಿ.ರವಿ ತಿರುಗೇಟು ನೀಡಿದರು.
ಕಾವೇರಿ ನದಿ ನೀರು ವಿಚಾರ ಸಂಬಂಧ ಪ್ರತಿಕ್ರಿಸಿದ ಸಿ.ಟಿ.ರವಿ, ಕುಡಿಯುವ ನೀರಿನ ವಿಚಾರದಲ್ಲಿ ತಾನು ಯಾವತ್ತೂ ಬೆಂಕಿ ಹಚ್ಚುವ ಕೆಲಸ ಮಾಡುವವನಲ್ಲ, ಈ ವಿಚಾರದಲ್ಲಿ ತನ್ನದು ಸೌಹಾರ್ದ ರಾಜಕಾರಣ. ಕುಡಿಯುವ ವಿಚಾರದಲ್ಲಿ ರಾಜಕಾರಣ ಮಾಡುವ ಉದ್ದೇಶ ನನಗಂತೂ ಇಲ್ಲ. ಇಂತಹ ವಿಚಾರಗಳಲ್ಲಿ ವಿವಾದ ಉಂಟಾದಾಗ ವಿವಾದ ಬಗೆಹರಿಸುವ ಕೆಲಸವನ್ನು ನ್ಯಾಯಾಲಯಗಳು ಮಾಡುತ್ತವೆ. ಯಾವ ಯಾವ ರಾಜ್ಯಗಳು ಎಷ್ಟು ಪ್ರಮಾಣದಲ್ಲಿ ನೀರನ್ನು ಬಳಸಿಕೊಳ್ಳಬೇಕೆಂದು ನ್ಯಾಯಾಲಯ ತೀರ್ಮಾನಿಸಿವೆ. ಅದರಂತೆ ನೀರಿನ ಬಳಕೆಯಲ್ಲಿ ಆಯಾ ರಾಜ್ಯಗಳು ಸರ್ವಸ್ವತಂತ್ರವಾಗಿವೆ ಎಂದರು.







