ಬಿಡಿಭಾಗಗಳನ್ನು ಬಳಸಿ ಹೆಲಿಕಾಪ್ಟರ್ ನಿರ್ಮಿಸಿದ್ದ ಇಸ್ಮಾಯೀಲ್ ಶೇಖ್ ಪರೀಕ್ಷಣೆಯ ವೇಳೆ ಮೃತ್ಯು !
ಸ್ವಾತಂತ್ರ್ಯ ದಿನದಂದು ಹೆಲಿಕಾಪ್ಟರ್ ಹಾರಿಸಲುದ್ದೇಶಿಸಿದ್ದ ಕನಸು ಭಗ್ನ

Photo: Indiatimes.com
ಯಾವತ್ಮಲ್: ತಾನು ವಿನ್ಯಾಸಗೊಳಿಸಿ ನಿರ್ಮಿಸಿದ ಹೆಲಿಕಾಪ್ಟರ್ನ ರೋಟೊರ್ ಬ್ಲೇಡುಗಳು ತುಂಡಾಗಿ ಅದರಿಂದ ಕತ್ತು ಸೀಳಲ್ಪಟ್ಟು ಯುವಕನೊಬ್ಬ ದಾರುಣ ಅಂತ್ಯ ಕಂಡ ಘಟನೆ ಮಹಾರಾಷ್ಟ್ರದ ಮಹಾಗಾಂವ್ ತೆಹ್ಸಿಲ್ನ ಫುಲ್ಸವಂಗಿ ಗ್ರಾಮದಿಂದ ಮಂಗಳವಾರ ರಾತ್ರಿ ವರದಿಯಾಗಿದೆ.

Photo: ABP live
ಮೃತ ಯುವಕನನ್ನು ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂ (24) ಎಂದು ಗುರುತಿಸಲಾಗಿದೆ. ಶಾಲಾ ಶಿಕ್ಷಣವನ್ನು ಎಂಟನೇ ತರಗತಿಯಲ್ಲಿರುವಾಗಲೇ ಕೈಬಿಟ್ಟಿದ್ದ ಈತ ನಂತರ ತನ್ನ ಸೋದರನ ಗ್ಯಾಸ್ ವೆಲ್ಡಿಂಗ್ ವರ್ಕ್ಶಾಪ್ನಲ್ಲಿ ಕೆಲಸ ಮಾಡುತ್ತಾ ಸ್ಟೀಲ್ ಮತ್ತು ಅಲ್ಯುಮೀನಿಯಂ ಶೀಟ್ಗಳನ್ನು ಬಳಸಿ ಕಪಾಟು ಮತ್ತಿತರ ಗೃಹಬಳಕೆಯ ವಸ್ತುಗಳ ತಯಾರಿಯಲ್ಲಿ ಪಳಗಿದ್ದ.
ತನ್ನ ಗ್ರಾಮದ ಹೆಸರನ್ನು ಎಲ್ಲೆಡೆ ಹರಡುವಂತಹ ಕೆಲಸ ಮಾಡಬೇಕೆಂಬ ಮಹದಾಸೆಯಿಂದ ಹಾಗೂ 3 ಈಡಿಯಟ್ಸ್ ಸಿನೆಮಾದ ರಾಂಚೊ ಪಾತ್ರಧಾರಿಯಿಂದ ಪ್ರಭಾವಿತವಾಗಿ ಆತ ಹೆಲಿಕಾಪ್ಟರ್ ವಿನ್ಯಾಸಗೊಳಿಸಲು ಯುಟ್ಯೂಬ್ ಮೂಲಕ ಅಗತ್ಯ ಮಾಹಿತಿ ಪಡೆದು ಎರಡು ವರ್ಷ ಕಾಲ ಅದಕ್ಕೆ ಬೇಕಾದ ಎಲ್ಲಾ ಬಿಡಿಭಾಗಗಳನ್ನು ಪಡೆದು ಸ್ಟೀಲ್ ಪೈಪ್ ವೆಲ್ಡ್ ಮಾಡಿ ಹಾಗೂ ಮಾರುತಿ 800 ಇಂಜಿನ್ ಬಳಸಿ ಸಿಂಗಲ್ ಸೀಟರ್ ಹೆಲಿಕಾಪ್ಟರ್ ವಿನ್ಯಾಸಗೊಳಿಸಿ ಅದನ್ನು ಸ್ವಾತಂತ್ರ್ಯ ದಿನದಂದು ಎಲ್ಲರಿಗೂ ಪ್ರದರ್ಶಿಸಬೇಕೆಂಬ ಉದ್ದೇಶದಿಂದ ಮಂಗಳವಾರ ಆತ ಪೈಲಟ್ ಸೀಟಿನಲ್ಲಿ ಕುಳಿತು ಅದರ ಇಂಜಿನ್ ಸ್ಟಾರ್ಟ್ ಮಾಡಿದ್ದ.
ರೋಟೊರ್ ಬ್ಲೇಡ್ಗಳು ವೇಗವಾಗಿ ತಿರುಗುವುದನ್ನು ಕಂಡು ಆತನ ಸ್ನೇಹಿತರೆಲ್ಲಾ ಖುಷಿ ಪಟ್ಟಿದ್ದರು. ಆದರೆ ಹಿಂಭಾಗದ ರೋಟೊರ್ ಬ್ಲೇಡ್ ಅಸೆಂಬ್ಲಿ ತುಂಡಾಗಿ ಮೇಲ್ಭಾಗದ ಬ್ಲೇಡುಗಳಿಗೆ ತಾಗಿ ನಂತರ ಅರೆ ಕ್ಷಣದಲ್ಲಿ ತುಂಡಾದ ಬ್ಲೇಡ್ ಇಸ್ಮಾಯಿಲ್ನ ಕತ್ತು ಸೀಳಿತ್ತು. ಅಲ್ಲಿದ್ದವರೆಲ್ಲ ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಅತನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.







