ಪ್ರತ್ಯೇಕ ಪ್ರಕರಣದ ಪ್ರಕ್ರಿಯೆಗಳು ಬಾಕಿಯಿರುವುದರಿಂದ ಕಫೀಲ್ ಖಾನ್ ಅಮಾನತು ಮುಂದುವರಿಕೆ
ಹೈಕೋರ್ಟಿಗೆ ಹೇಳಿದ ಉ.ಪ್ರ ಸರಕಾರ

ಲಕ್ನೋ: ಗೋರಖಪುರದ ವೈದ್ಯ ಡಾ. ಕಫೀಲ್ ಖಾನ್ ಅವರ ಅಮಾನತು ಆದೇಶ ಇನ್ನೂ ಜಾರಿಯಲ್ಲಿದ್ದು ಅವರ ವಿರುದ್ಧ ನಡೆಯುತ್ತಿರುವ ಪ್ರತ್ಯೇಕ ಸ್ವತಂತ್ರ ಶಿಸ್ತು ಕ್ರಮ ಇನ್ನೂ ಪೂರ್ಣಗೊಳ್ಳಬೇಕಿದೆ ಎಂದು ಉತ್ತರಪ್ರದೇಶ ಸರಕಾರ ಅಲಹಾಬಾದ್ ಹೈಕೋರ್ಟಿಗೆ ಇಂದು ತಿಳಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ಖಾನ್ ಅವರ ಅಮಾನತು ಆದೇಶ ವಿಸ್ತರಿಸಿರುವುದರಿಂದ ಇದಕ್ಕೆ ಸಮರ್ಥನೆಯೊದಗಿಸುವಂತೆ ನ್ಯಾಯಾಲಯ ಈ ಹಿಂದೆ ರಾಜ್ಯದ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಸೂಚಿಸಿತ್ತು.
ಗೋರಖಪುರದ ಬಾಬಾ ರಾಘವ ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 2017ರಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆಯಿಂದಾಗಿ 63 ಮಕ್ಕಳು ಸಾವನ್ನಪ್ಪಿದ ಘಟನೆಯ ನಂತರ ವೈದ್ಯಕೀಯ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ಕರ್ತವ್ಯಲೋಪ ಆರೋಪ ಹೊರಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ತನ್ನ ಸ್ವಂತ ಹಣದಿಂದ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗಲು ಅವರು ಕ್ರಮ ಕೈಗೊಂಡಿದ್ದ ಹೊರತಾಗಿಯೂ ಅವರ ವಿರುದ್ಧ ಇಂತಹ ಆರೋಪ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಸೆಪ್ಟೆಂಬರ್ 2019ರಲ್ಲಿ ಉತ್ತರ ಪ್ರದೇಶ ಸರಕಾರ ಖಾನ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದರೂ ಅಕ್ಟೋಬರ್ 2019ರಲ್ಲಿ ಮತ್ತೊಂದು ಹೊಸ ತನಿಖೆ ಆರಂಭಿಸಿ ತಪ್ಪು ಮಾಹಿತಿ ಹರಡಿದ ಆರೋಪ ಹೊರಿಸಲಾಗಿತ್ತು.
ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 31ಕ್ಕೆ ನಿಗದಿಪಡಿಸಿದೆಯಲ್ಲದೆ ಅಷ್ಟರೊಳಗಾಗಿ ಸಂಬಂಧಿತ ಎಲ್ಲಾ ಮಾಹಿತಿಗಳನ್ನೊಳಗೊಂಡ ಅಫಿಡವಿಟ್ ಸಲ್ಲಿಸುವಂತೆಯೂ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದೆ.





