ಅನುದಾನ ನೀಡದಿದ್ದರೆ ಬೇರೆ ಯೋಚನೆ ಮಾಡುತ್ತೇನೆ:ಪರೋಕ್ಷವಾಗಿ ರಾಜೀನಾಮೆ ಎಚ್ಚರಿಕೆ ನೀಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ

ಬೆಂಗಳೂರು, ಆ. 13: `ಖಾತೆ ಬದಲಾವಣೆಗೆ ಪಟ್ಟು ಹಿಡಿದು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದ ಸಚಿವ ಆನಂದ್ ಸಿಂಗ್ ಬೆನ್ನಿಗೆ ಇದೀಗ `ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಅನುದಾನ ಒದಗಿಸದಿದ್ದರೆ ಬೇರೆ ಯೋಚನೆ ಮಾಡಬೇಕಾಗುತ್ತದೆ' ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪರೋಕ್ಷವಾಗಿ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕೊರೋನ ಸೋಂಕಿನ ಕಾರಣ ನಾವು ಇಷ್ಟು ದಿನ ಸುಮ್ಮನಾಗಿದ್ದೆವು. ಆದರೆ, ಕ್ಷೇತ್ರದಲ್ಲಿ ಜನರ ಸಂಕಷ್ಟವನ್ನು ಕಣ್ಣಿಂದ ನೋಡಲು ಸಾಧ್ಯವಾಗುತ್ತಿಲ್ಲ. ಅವರು ನಮಗೆ ಛೀಮಾರಿ ಹಾಕುತ್ತಿದ್ದಾರೆ. ಅದಕ್ಕೆ ನಾವು ಜನರಿಗಾಗಿ ಹೋರಾಟ ಮಾಡಬೇಕಾದ ಅವಶ್ಯವಿದೆ ಎಂದು ನಾನು ನಿನ್ನೆ ಧ್ವನಿ ಎತ್ತಿದ್ದೇನೆ' ಎಂದು ಸ್ಪಷ್ಟಪಡಿಸಿದರು.
`ಮೂಡಿಗೆರೆ ಕ್ಷೇತ್ರದಲ್ಲಿ 2019ರಲ್ಲಿ ನೆರೆ ಬಂದಿತ್ತು. ಈ ವೇಳೆ ಅನೇಕರು ಪ್ರಾಣ ಕಳೆದುಕೊಂಡರು, ಎಷ್ಟೋ ಜನರ ಮನೆ ನಾಶವಾಯಿತು. ನೂರಾರು ಎಕರೆ ಜಮೀನು ನೆರೆ ನೀರಿನಲ್ಲಿ ಕೊಚ್ಚಿ ಹೋಯಿತು. ಆಗ ಯಡಿಯೂರಪ್ಪ ಅವರು ಪರಿಹಾರ ಕೊಡುವುದಾಗಿ ಹೇಳಿದ್ದರು. ಆದರೆ, ಅವರು ಇನ್ನೂ ಕೊಟ್ಟಿಲ್ಲ. ಎಷ್ಟೋ ಜನರು ಇನ್ನೂ ಬಾಡಿಗೆ ಮನೆಯಲ್ಲಿದ್ದು, ಬಾಡಿಗೆ ಕಟ್ಟಲು ದುಡ್ಡಿಲ್ಲದೆ ಪರದಾಡುತ್ತಿದ್ದಾರೆ' ಎಂದು ಕುಮಾರಸ್ವಾಮಿ ನೋವಿನಲ್ಲಿ ನುಡಿದರು.





