ನಮ್ಮ ಹಬ್ಬಗಳಿಗೆ ಮಾತ್ರ ನಿರ್ಬಂಧ ಹೇರಿದರೆ ಉಲ್ಲಂಘನೆ ಮಾಡುತ್ತೇವೆ: ಬಿಜೆಪಿ ಶಾಸಕ ಯತ್ನಾಳ್

ವಿಜಯಪುರ, ಆ. 13: `ಕೋವಿಡ್ ಸೋಂಕಿನ ನೆಪದಲ್ಲಿ ಅವರಿಗೊಂದು ಕಾನೂನು, ನಮಗೊಂದು ಕಾನೂನು ನಡೆಯುವುದಿಲ್ಲ. ಹಿಂದೂ ಹಬ್ಬಗಳಿಗೆ ಮಾತ್ರ ನಿರ್ಬಂಧ ಹೇರಿದರೆ ಅದನ್ನು ಉಲ್ಲಂಘನೆ ಮಾಡುತ್ತೇವೆ' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರಕಾರದ ಆದೇಶದ ವಿರುದ್ಧವೇ ಗುಟುರು ಹಾಕಿದ್ದಾರೆ.
ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ಹಿಂದೂ ಮತ್ತು ಮುಸ್ಲಿಮ್ ಎರಡೂ ಹಬ್ಬಗಳಿಗೂ ನಿರ್ಬಂಧ ಅನ್ವಯವಾಗಬೇಕು. ಗಣೇಶ್ ಚತುರ್ಥಿಗೆ ಮಾತ್ರ ನಿಷೇಧ ಹೇರಿದರೆ ಸರಿಯಲ್ಲ. ಅದು ಮುಹರ್ರಂಗೂ ಅನ್ವಯವಾಗಬೇಕು. ಕೋವಿಡ್ ಮೂರನೆಯ ಅಲೆ ಭಯಾನಕವಾಗಿದೆ ಎಂಬ ಆತಂಕವಿದೆ. ಹೀಗಾಗಿ ಜನರ ರಕ್ಷಣೆಗಾಗಿ ನಿಬರ್ಂಧ ವಿಧಿಸಿದ್ದರ ಬಗ್ಗೆ ನಮಗೆ ಆಕ್ಷೇಪವಿಲ್ಲ. ಅದನ್ನ ಎಲ್ಲರೂ ಪಾಲಿಸುತ್ತೇವೆ. ಆದರೆ, ಕೋವಿಡ್ ನೆಪದಲ್ಲಿ ಕೇವಲ ಹಿಂದೂಗಳ ಹಬ್ಬಕ್ಕೆ ನಿಬರ್ಂಧ ವಿಧಿಸಿದರೆ ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಆನಂದ್ ಸಿಂಗ್ ಪಾತ್ರ ಮುಖ್ಯ: `ಸಚಿವ ಆನಂದ್ ಸಿಂಗ್ ಉತ್ತಮ ಆಡಳಿತಗಾರರು. ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಸರಕಾರ ರಚನೆ ಮಾಡಲು ಆನಂದ್ ಸಿಂಗ್ ಪಾತ್ರ ಬಹಳ ಪ್ರಮುಖ. ಈ ಹಿಂದೆ ಅರಣ್ಯ ಇಲಾಖೆಯಲ್ಲಿದ್ದ ಹಲವು ಸಮಸ್ಯೆಗಳನ್ನ ಆನಂದ್ ಸಿಂಗ್ ಬಗೆಹರಿಸಿದ್ದಾರೆ. ಆನಂದ್ ಸಿಂಗ್ ಸಮರ್ಥವಾಗಿ ಖಾತೆಗಳನ್ನ ನಿಭಾಯಿಸಿದ್ದಾರೆ. ಅವರ ಬೇಡಿಕೆಯನ್ನು ಸಿಎಂ ಪೂರೈಸಬೇಕು' ಎಂದು ಯತ್ನಾಳ್ ಸಲಹೆ ಮಾಡಿದರು.
ಹೋರಾಟ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗ `ಪ್ರವರ್ಗ 2 ಎ' ಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ನೀಡಿದ್ದಾರೆ. ಪ್ರಧಾನಿ ಮೋದಿ ಈ ಐತಿಹಾಸಿಕ ತಿದ್ದುಪಡಿ ಸ್ವಾಗತಿಸುತ್ತೇನೆ. ಮೀಸಲಾತಿ ವಿಚಾರವಾಗಿ ಯಾವುದೇ ನೆಪಗಳನ್ನು ಹೇಳದೆ ಕೂಡಲೇ ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಬೇಕು ಎಂದು ಯತ್ನಾಳ್ ಆಗ್ರಹಿಸಿದರು.
ಜೊತೆಗೆ ಮಡಿವಾಳ, ಹಡಪದ ಸಮಾಜ, ಗಂಗಾ ಮತಸ್ಥ, ತಳವಾರ, ಕೋಲಿ ಸಮಾಜಕ್ಕೂ ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸಬೇಕು. ಈ ನಿಟ್ಟಿನಲ್ಲಿ ಸಿಎಂ ಅವರು ಕ್ರಮ ತೆಗೆದುಕೊಳ್ಳದಿದ್ದರೆ ಅನಿವಾರ್ಯವಾಗಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ ಯತ್ನಾಳ್, ಶಾಸಕ ಪ್ರೀತಂ ಗೌಡ ಅವರು ಜೆಡಿಎಸ್ ವಿರುದ್ಧ ಹೋರಾಟ ಮಾಡಿ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಸಿಎಂ ಅವರು ದೇವೇಗೌಡ ಭೇಟಿ ಆಗಿದ್ದಕ್ಕೆ ಅವರಿಗೆ ಒಂದು ರೀತಿಯ ಕಸಿವಿಸಿ ಆಗಿದೆ. ದೇವೇಗೌಡ ಒಬ್ಬರನ್ನೇ ಭೇಟಿ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.







