ಅಂಡರ್-19 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕ ಉನ್ಮುಕ್ತ್ ಚಂದ್ ನಿವೃತ್ತಿ

photo: twitter
ಹೊಸದಿಲ್ಲಿ: ಭಾರತದ 2012ರ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಉನ್ಮುಕ್ತ್ ಚಂದ್ ತನ್ನ 28ನೇ ವಯಸ್ಸಿನಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಾರೆ. ಟ್ವಿಟರ್ ಖಾತೆಯ ಮೂಲಕ ಅವರು ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ನಾನು ಬಿಸಿಸಿಐಗೆ ವಿದಾಯ ಹೇಳಲಿದ್ದು, ವಿಶ್ವದಲ್ಲಿ ಉತ್ತಮ ಅವಕಾಶದ ನಿರೀಕ್ಷೆಯಲ್ಲಿರುವೆ ಎಂದು ಬರೆದುಕೊಂಡಿದ್ದಾರೆ.
2012ರಲ್ಲಿ ನಡೆದಿದ್ದ ಅಂಡರ್-19 ಕ್ರಿಕೆಟ್ ವಿಶ್ವಕಪ್ ನ ಫೈನಲ್ ನಲ್ಲಿ ಆಸ್ಟ್ರೇಲಿಯ ವಿರುದ್ಧ ಔಟಾಗದೆ 111 ರನ್ ಗಳಿಸಿದ್ದ ಚಂದ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದರು. ಉನ್ನತ ಮಟ್ಟದ ಕ್ರಿಕೆಟ್ ನಲ್ಲೂ ಯಶಸ್ಸು ಕಂಡರೂ ಕೂಡ ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯವಾಗಲಿಲ್ಲ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗಿಲ್ಲ.
ವೈಯಕ್ತಿಕವಾಗಿ ಭಾರತದಲ್ಲಿನ ನನ್ನ ಕ್ರಿಕೆಟ್ ಜೀವನದಲ್ಲಿ ಕೆಲವು ಸ್ಮರಣೀಯ ಕ್ಷಣವನ್ನು ನೋಡಿದ್ದೇನೆ. ಭಾರತಕ್ಕಾಗಿ ಅಂಡರ್-19 ವಿಶ್ವಕಪ್ ಗೆದ್ದಿರುವುದು ನನ್ನ ಜೀವನದ ಸ್ಮರಣೀಯ ಕ್ಷಣವಾಗಿತ್ತು. ನಾಯಕನಾಗಿ ಟ್ರೋಫಿ ಎತ್ತಿ ಹಿಡಿದಿರುವುದು ವಿಶೇಷವಾಗಿತ್ತು. ಇದು ವಿಶ್ವದಾದ್ಯಂತ ಭಾರತೀಯರ ಮುಖದಲ್ಲಿ ನಗು ತಂದಿತ್ತು. ಆ ಕ್ಷಣವನ್ನು ಮರೆಯಲಾರೆ. ಭಾರತ ಎ ತಂಡವನ್ನು ಹಲವು ಬಾರಿ ನಾಯಕನಾಗಿ ಮುನ್ನಡೆಸಿದ್ದೇನೆ. ಹಲವು ದ್ವಿಪಕ್ಷೀಯ ಹಾಗೂ ತ್ರಿಕೋನ ಸರಣಿಯಲ್ಲಿ ಜಯ ಸಾಧಿಸಿದ್ಧೇನೆ ಎಂದು ಚಂದ್ ಹೇಳಿದ್ದಾರೆ.
ಚಂದ್ 67 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 31.57ರ ಸರಾಸರಿಯಲ್ಲಿ ಒಟ್ಟು 3,379 ರನ್ ಗಳಿಸಿದ್ದಾರೆ. 120 ಲಿಸ್ಟ್ ಎ ಕ್ರಿಕೆಟ್ ಪಂದ್ಯಗಳಲ್ಲಿ 4,505 ರನ್ ಗಳಿಸಿದ್ದರು. ಟಿ-20 ಕ್ರಿಕೆಟ್ ನಲ್ಲಿ ಆಡಿರುವ 77 ಪಂದ್ಯಗಳಲ್ಲಿ ಒಟ್ಟು 1,565 ರನ್ ಗಳಿಸಿದ್ದರು.
ಶಾಲೆಯಲ್ಲಿರುವಾಗಲೇ ದಿಲ್ಲಿ ಪರ ರಣಿಜಿ ಟ್ರೋಫಿ ಪಂದ್ಯಕ್ಕೆ ಪದಾರ್ಪಣೆಗೈದಿದ್ದರು. ತನ್ನ 4ನೇ ಪಂದ್ಯದಲ್ಲಿ ಚೊಚ್ಚಲ ಶತಕ(151)ಗಳಿಸಿದ್ದರು. 18ನೇ ವಯಸ್ಸಿನಲ್ಲಿ ಐಪಿಎಲ್ ಗೆ ಕಾಲಿಟ್ಟಿದ್ದರು. ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಲ್ಲಿ ಗಮನ ಸೆಳೆದಿದ್ದರು. ಭಾರತ ಎ ತಂಡದಲ್ಲಿ ಖಾಯಂ ಆಟಗಾರನಾಗಿದ್ದ ಅವರು 2013ರಲ್ಲಿ ನ್ಯೂಝಿಲ್ಯಾಂಡ್ ಎ ಹಾಗೂ 2015ರಲ್ಲಿ ಬಾಂಗ್ಲಾದೇಶ ಎ ವಿರುದ್ಧ ಜಯ ಸಾಧಿಸಲು ತಂಡದ ನಾಯಕತ್ವವಹಿಸಿದ್ದರು.
ಆ ಬಳಿಕ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ಅವರು ದಿಲ್ಲಿ ತಂಡದಲ್ಲೂ ಸ್ಥಾನ ಕಳೆದುಕೊಂಡಿದ್ದರು. 2016ರಲ್ಲಿ 50 ಓವರ್ ಗಳ ವಿಜಯ ಹಝಾರೆ ಟ್ರೋಫಿ ತಂಡದಿಂದ ಹೊರಗುಳಿದರು. ಮುಂಬೈ ಇಂಡಿಯನ್ಸ್ ತಂಡವನ್ನು ತ್ಯಜಿಸಿದ್ದರು. ಐಪಿಎಲ್ ಆಟಗಾರರ ಹರಾಜಿನಲ್ಲಿ ಹರಾಜಾಗದೆ ಉಳಿದಿದ್ದರು. 2019-20ರಲ್ಲಿ ಉತ್ತರಾಖಂಡದಲ್ಲಿ ವೃತ್ತಿಜೀವನ ಮುಂದುವರಿಸಿದರೂ ಅಲ್ಲಿ ಯಶಸ್ಸು ಸಿಗಲಿಲ್ಲ. 7 ಪಂದ್ಯಗಳಲ್ಲಿ 195 ರನ್ ಗಳಿಸಿದ್ದರು.