ರೈತರ ಸಂಘಗಳ ಜೊತೆ ಸಚಿವ ಅಶ್ವತ್ಥ ನಾರಾಯಣ ಸಭೆ
ರಾಮನಗರ, ಆ.13: ಜಿಲ್ಲೆಯಲ್ಲಿ ಕೃಷಿ ಮತ್ತು ರೈತರ ಸಂಘಗಳ (ಈPಔ) ನಡುವೆ ಸೌಹಾರ್ದತೆ ಮತ್ತು ಸಹಯೋಗ ಹೆಚ್ಚಿ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ವಿವಿಧ ಸಂಘಗಳ ಮುಖ್ಯಸ್ಥರ ಜತೆ ಸಭೆ ನಡೆಸಿದರು.
ಕೃಷಿ ಕಲ್ಪ ಪೌಂಢೇಷನ್ ಅಧ್ಯಕ್ಷ ಪ್ರಶಾಂತ ಪ್ರಕಾಶ್, ಕೃಷಿ ಕಲ್ಪ ಸಿಇಒ ಸಿ.ಎಂ.ಪಾಟೀಲ್ ಸೇರಿದಂತೆ ಇನ್ನೂ ಹಲವರ ಜತೆ ಸಂವಾದ ನಡೆಸಿದ ಅವರು, ವಿವಿಧ ಸಮಸ್ಯೆಗಳು-ಸವಾಲುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈಗ ಎಲ್ಲ ಕ್ಷೇತ್ರಗಳಲ್ಲೂ ಡಿಜಿಟಲೀಕರಣ ಆಗುತ್ತಿದ್ದು, ರಾಮನಗರ ಜಿಲ್ಲೆಯಲ್ಲಿ ಡಿಜಿಟಲೀಕರಣ ಮಾಡುವ ಬಗ್ಗೆ ಮೊದಲ ಪೈಲೆಟ್ ಪ್ರಾಜೆಕ್ಟ್ ಜಾರಿಗೆ ಬರುತ್ತಿದೆ. ರೈತರಿಗೆ ತಾಂತ್ರಿಕತೆ ಕಲಿಸುವ ಉದ್ದೇಶದ ಜತೆಗೆ, ಸಣ್ಣ ಜಿಲ್ಲೆ ಹಾಗು ಹಳ್ಳಿಗಳಲ್ಲಿ ಉದ್ದಿಮೆದಾರರು ಸೃಷ್ಟಿಯಾಗಬೇಕು. ರೈತರ ಉತ್ಪಾದಕ ಸಂಘಗಳು ಮತ್ತು ರೈತರ ನಡುವೆ ಹೆಚ್ಚೆಚ್ಚು ಸಂಪರ್ಕ ಕಲ್ಪಿಸಿ ರೈತರ ಆದಾಯ ಹೆಚ್ಚಿಸಬೇಕು ಎಂದು ಅವರು ಹೇಳಿದರು.
ಕೃಷಿ ಕ್ಷೇತ್ರವನ್ನು ಉತ್ಪಾದಕ ಕಂಪನಿಯಂತೆ ಪರಿವರ್ತಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಕೃಷಿ ಉತ್ಪಾದಕ ಸಂಘಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಅಶ್ವತ್ಥ ನಾರಾಯಣ ಹೇಳಿದರು.
ಚಕ್ರಭಾವಿಯ ಎಫ್‍ಬಿಒ ಸಿಇಒ ಬೈರೇಶ್, ಕೆಂಗಲ್ ಎಫ್‍ಬಿಒ ಸಿಇಒ ಜ್ಯೋತಿ, ಅರ್ಕಾವತಿ ಎಫ್‍ಪಿಒ ಸಿಇಒ ವನಿತಾ ಮುಂತಾದವರು ಸಭೆಯಲ್ಲಿದ್ದರು.





