ಗಾರ್ಡ್ ಆಫ್ ಹಾನರ್ ಸಹಿತ ವಿಐಪಿ ನಿಯಮಾವಳಿ ಮೊಟಕುಗೊಳಿಸುವ ಸಿಎಂ ನಿಲುವು ಶ್ಲಾಘನೀಯ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ
ಮಂಗಳೂರು : ಜನಪ್ರತಿನಿಧಿಗಳಿಗೆ ನೀಡುವ ಅಮಿತ ಗೌರವಾದರಗಳು ಮತ್ತು ಅದಕ್ಕೆ ಪೂರಕವಾಗಿರುವ ಹಲವು ನಿಯಮಗಳು ಪ್ರಜಾಪ್ರಭುತ್ವದಲ್ಲಿನ ಮೌಲ್ಯಗಳನ್ನು ಅಪಹಾಸ್ಯಕ್ಕೀಡು ಮಾಡುವಂತಹ ಮಟ್ಟಿಗೆ ಇಳಿದಿದ್ದು, ಅಷ್ಟೊಂದು ಅನಗತ್ಯ ರಿವಾಜುಗಳನ್ನು ಮೊಟಕುಗೊಳಿಸಲು ಮುಂದಾಗಿರುವ ನಮ್ಮ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರ ನಿಲುವು ನಿಜಕ್ಕೂ ಅಭಿನಂದನಾರ್ಹವಾಗಿದ್ದು, ಗಾರ್ಡ್ ಆಫ್ ಹಾನರ್ ಬೇಡ ಎನ್ನುವ ಸೂಚನೆಯನ್ನು ಪೊಲೀಸ್ ಇಲಾಖೆಗೆ ನೀಡುವ ಮೂಲಕ ಪ್ರಜಾಸತ್ತೆಯ ಗೌರವವನ್ನು ಎತ್ತಿಹಿಡಿದಿದ್ದಾರೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿಯಲ್ಲಿ ಸಾರ್ವಜನಿಕರಿಗೆ ಅಡ್ಡಿಪಡಿಸಿ ಝೀರೋ ಟ್ರಾಫಿಕ್ ಮಾಡಿಕೊಂಡು ರಾಜಕಾರಣಿಗಳು ಹೋಗುವುದರ ಬಗ್ಗೆಯೂ ರಾಜ್ಯದ ಗೃಹ ಸಚಿವರು ಇನ್ನು ಮುಂದೆ ಸಲ್ಲದು ಎಂದು ಹೇಳಿರುವುದು ಗಮನಾರ್ಹವಾಗಿದ್ದು, ಹೀಗೆ ರಾಜ್ಯದ ಖಜಾನೆಗೆ ಆಗುವ ಪ್ರತಿಯೊಂದು ಅನಗತ್ಯ ವೆಚ್ಚಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಮಯ ಪೋಲು ಮಾಡುವುದನ್ನು ನಿವಾರಿಸಿದಲ್ಲಿ ಪ್ರಜಾಪ್ರಭುತ್ವದ ನೀತಿಗೆ ಮಹತ್ವ ಕಲ್ಪಿಸಿ ಕೊಟ್ಟಂತಾಗುತ್ತದೆ. ಮಾತ್ರವಲ್ಲದೆ ಜನನಾಯಕರುಗಳಿಗೆ ಸ್ವಾಗತ ನೀಡುವ ನೆಪದಲ್ಲಿ ವ್ಯರ್ಥಗೊಳಿಸುವ ಹೂವು, ಹಾರ ತುರಾಯಿಗಳನ್ನು ಕೂಡಾ ಕಡಿತಗೊಳಿಸುವಂತೆ ಮುಖ್ಯಮಂತ್ರಿಯವರು ಸಲಹೆ ನೀಡಿದ್ದು ಪ್ರಶಂಸನಾರ್ಹವಾಗಿದೆ ಎಂದು ಅವರು ಈ ಸಂದರ್ಭ ಹೇಳಿದ್ದಾರೆ.







