ಕೇರಳದಲ್ಲಿ ದೇಶದ ಮೊದಲ ಡ್ರೋನ್ ವಿಧಿವಿಜ್ಞಾನ ಪ್ರಯೋಗಾಲಯ ಆರಂಭ

ತಿರುವನಂತಪುರ, ಆ. 13: ದೇಶದ ಮೋದಲ ಡ್ರೋನ್ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಉದ್ಘಾಟಿಸಿದರು. ಡ್ರೋನ್ಗಳನ್ನು ಬಳಸಿ ನಡೆಸುತಿರುವ ದಾಳಿಗಳು ದೇಶದ ಭದ್ರತೆಗೆ ಒಡ್ಡುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಇಲ್ಲಿನ ಎಸ್ಎಪಿ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಕೇಂದ್ರವನ್ನು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ದೇಶ ವಿರೋಧಿ ಶಕ್ತಿಗಳು ಬೇಹುಗಾರಿಕೆ, ಕಳ್ಳ ಸಾಗಾಟ ಹಾಗೂ ಭಯೋತ್ಪಾದನೆ ಸೇರಿದಂತೆ ವಿವಿಧ ವಿಧ್ವಂಸಕ ಕೃತ್ಯಗಳಿಗೆ ಡ್ರೋನ್ಗಳನ್ನು ಬಳಸುತ್ತಿವೆ ಎಂದರು. ಇಂದಿನ ದಿನಗಳಲ್ಲಿ ಪೊಲೀಸರು ಸೇರಿದಂತೆ ವಿವಿಧ ಭದ್ರತಾ ಸಂಸ್ಥೆಗಳಿಗೆ ಇದೊಂದು ಗಂಭೀರ ಸವಾಲು. ಈ ಹಿನ್ನೆಲೆಯಲ್ಲಿ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು. ಡ್ರೋನ್ ನಿರೋಧಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. 5 ಕಿ.ಮೀ. ವ್ಯಾಪ್ತಿಯಲ್ಲಿ ಹಾರಾಡುವ ಎಲ್ಲಾ ರೀತಿಯ ಡ್ರೋನ್ಗಳನ್ನು ಪತ್ತೆ ಹಚ್ಚಿ ಅವುಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಈ ವ್ಯವಸ್ಥೆ ಹೊಂದಲಿದೆ ಎಂದು ಎಡಿಜಿಪಿ ಮನೋಜ್ ಅಬ್ರಹಾಂ ಹೇಳಿದರು.







