ಸ್ಯಾಮ್ಸಂಗ್ ಉಪಾಧ್ಯಕ್ಷ ಲೀ ಪರೋಲ್ ಮೇಲೆ ಬಿಡುಗಡೆ
ಸಿಯೋಲ್, ಆ.13: ಲಂಚ ಪಾವತಿ, ಹಣ ದುರುಪಯೋಗ ಮತ್ತಿತರ ಅಪರಾಧದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಸ್ಯಾಮ್ಸಂಗ್ ಇಲೆಕ್ಟ್ರಾನಿಕ್ಸ್ ನ ಉಪಾಧ್ಯಕ್ಷ ಜೆ.ವೈ. ಲೀ ಪರೋಲ್ ಮೇಲೆ ಬಿಡುಗಡೆಯಾಗಲಿದ್ದಾರೆ ಎಂದು ದಕ್ಷಿಣ ಕೊರಿಯಾದ ಕಾನೂನು ಮತ್ತು ನ್ಯಾಯ ಇಲಾಖೆ ಹೇಳಿದೆ.
ಸಾರ್ವಜನಿಕರ ಅನಿಸಿಕೆ, ಬಂಧನದಲ್ಲಿದ್ದ ಸಂದರ್ಭ ಉತ್ತಮ ನಡವಳಿಕೆ ಮುಂತಾದ ಹಲವು ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಲೀಗೆ ಪರೋಲ್ ಮಂಜೂರುಗೊಳಿಸುವ ಸರ್ವಾನುಮತದ ನಿರ್ಧಾರಕ್ಕೆ ಬರಲಾಗಿದೆ ಎಂದು ಇಲಾಖೆ ಸೋಮವಾರ ಹೊರಡಿಸಿದ ಹೇಳಿಕೆ ತಿಳಿಸಿದೆ.
ಮಾಜಿ ಅಧ್ಯಕ್ಷ ಪಾರ್ಕ್ ಗೆನ್ಹೆಯ ಮಿತ್ರನೊಬ್ಬನಿಗೆ ಲಂಚ ನೀಡಿರುವ ಆರೋಪದಲ್ಲಿ ಲೀ(53 ವರ್ಷ)ಗೆ 30 ತಿಂಗಳ ಸಜೆ ವಿಧಿಸಲಾಗಿದ್ದು ಇದರಲ್ಲಿ 18 ತಿಂಗಳ ಶಿಕ್ಷಾವಧಿ ಪೂರ್ಣಗೊಂಡ ಬಳಿಕ ಪರೋಲ್ ಲಭಿಸಿದೆ. ಲೀ ಬಂಧನದಿಂದ ವಿಶ್ವದಲ್ಲಿ ಸ್ಮಾರ್ಟ್ಫೋನ್ ತಯಾರಿಸುವ ಅತೀ ದೊಡ್ಡ ಸಂಸ್ಥೆಯಾಗಿರುವ ಸ್ಯಾಮ್ಸಂಗ್ನ ದೈನಂದಿನ ಕಾರ್ಯನಿರ್ವಹಣೆಗೆ ತೊಂದರೆಯಾಗದಿದ್ದರೂ ಬೃಹತ್ ಮೊತ್ತದ ವ್ಯವಹಾರಕ್ಕೆ ಸಹಿ ಹಾಕುವಾಗ ಅಥವಾ ನಿರ್ಧರಿಸುವಾಗ ಲೀ ಉಪಸ್ಥಿತಿ ಅಗತ್ಯವಾಗಿರುತ್ತದೆ. ಲೀಗೆ ಪರೋಲ್ ನೀಡಬೇಕೆಂದು ರಾಜಕೀಯ ವಲಯ ಹಾಗೂ ಸಾರ್ವಜನಿಕರಿಂದ ತೀವ್ರ ಒತ್ತಾಯ ಕೇಳಿ ಬಂದಿತ್ತು.
ಲೀ ಮತ್ತೆ ಸಂಸ್ಥೆಯ ಸೇವೆಗೆ ವಾಪಸಾಗಬೇಕಿದ್ದರೆ ದೇಶದ ಕಾನೂನು ಮತ್ತು ನ್ಯಾಯ ಇಲಾಖೆಯ ಅನುಮೋದನೆ ಅಗತ್ಯವಾಗಿದೆ. ಅಕ್ರಮವಾಗಿ ಹಣ ಸಂಪಾದನೆ ಆರೋಪಕ್ಕೆ ಸಂಬಂಧಿಸಿದ ಮೊತ್ತವನ್ನು ಲೀ ಸರಕಾರಕ್ಕೆ ಮರು ಪಾವತಿಸಿರುವುದರಿಂದ ನ್ಯಾಯ ಇಲಾಖೆಯ ಅನುಮತಿ ದೊರಕುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.







