ಮೇಕೆದಾಟು ಕಾಮಗಾರಿಯನ್ನು ಮಾಡಲೇಬೇಕು: ಶಾಸಕ ಅಪ್ಪಚ್ಚು ರಂಜನ್ ಒತ್ತಾಯ

ಮಡಿಕೇರಿ: 'ಮೇಕೆದಾಟು ನಮ್ಮ ರಾಜ್ಯದ ಸಂಪತ್ತು, ನಾವು ಅಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಲು ತಮಿಳುನಾಡಿನವರನ್ನು ಕೇಳ ಬೇಕಾದ ಅಗತ್ಯವಿಲ್ಲ. ಹೀಗಾಗಿ ಸರ್ಕಾರ ಮೇಕೆದಾಟು ಕಾಮಗಾರಿಯನ್ನು ಮಾಡಲೇಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಒತ್ತಾಯಿಸಿದರು.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್, 'ಮೇಕೆದಾಟು ಯೋಜನೆ ಮಾಡುವುದರಿಂದ ರಾಜ್ಯದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ. ಬರೋಬ್ಬರಿ 60 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಬಹುದು. ಆದ್ದರಿಂದ ಸರ್ಕಾರ ಕೂಡಲೇ ಯೋಜನೆ ಕಾಮಗಾರಿಗೆ ಮುಂದಾಗಲಿ' ಎಂದು ಆಗ್ರಹಿಸಿದರು.
' ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ನದಿಗಳು ರಾಷ್ಟ್ರೀಯ ಸಂಪತ್ತು ಎಂದು ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಪ್ಪಚ್ಚು ರಂಜನ್, ಕಾವೇರಿ ಕೂಡ ರಾಷ್ಟ್ರೀಯ ಸಂಪತ್ತು. ಆದರೆ ಕಾವೇರಿ ನೀರನ್ನು ನಾವು ಎಷ್ಟನ್ನು ಬಳಸಿಕೊಂಡು ಎಷ್ಟನ್ನು ತಮಿಳುನಾಡಿಗೆ ಕೊಡಬೇಕೆಂದು ನಿರ್ಧಾರವಾಗಿದೆ. ಕೇಂದ್ರವೇ ಅದನ್ನು ನಿರ್ಧರಿಸಿರುವಾಗ ಮೇಕೆದಾಟು ವಿಚಾರದಲ್ಲೂ ಅದೇ ರೀತಿ ಆಗುತ್ತದೆ. ಕೇಂದ್ರ ನೀರಾವರಿ ಸಲಹಾ ಸಮಿತಿಯ ನಿರ್ದೇಶನದಂತೆ ಮೇಕೆದಾಟು ಯೋಜನೆ ಕಾಮಗಾರಿ ಆರಂಭವಾಗಲಿ' ಎಂದು ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಒತ್ತಾಯಿಸಿದರು.







