ವಿಶ್ವ ಆರ್ಚರಿ ಯೂತ್ ಚಾಂಪಿಯನ್ಶಿಪ್: ಭಾರತ ಮಹಿಳಾ, ಪುರುಷರ ತಂಡಗಳಿಗೆ ಚಿನ್ನ

photo: Twitter
ಹೊಸದಿಲ್ಲಿ: ವ್ರೋಕ್ಲಾದಲ್ಲಿ ಶನಿವಾರ ನಡೆದ ವಿಶ್ವ ಆರ್ಚರಿ ಯೂತ್ ಚಾಂಪಿಯನ್ಶಿಪ್ನಲ್ಲಿ ಭಾರತವು ಕಾಂಪೌಂಡ್ ಕೆಡೆಟ್ ಮಹಿಳಾ ಹಾಗೂ ಪುರುಷರ ತಂಡದ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದಿದೆ.
ಫೈನಲ್ನಲ್ಲಿ ಮಹಿಳಾ ತಂಡವು 228-216 ಅಂತರದಿಂದ ಟರ್ಕಿಯನ್ನು ಸೋಲಿಸಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ಕೆಡೆಟ್ ಪುರುಷರ ತಂಡವು ಫೈನಲ್ನಲ್ಲಿ ಅಮೆರಿಕಕ್ಕಿಂತ ಉತ್ತಮ ಪ್ರದರ್ಶನ ನೀಡಿತು.
ಪರ್ನೀತ್ ಕೌರ್, ಪ್ರಿಯಾ ಗುರ್ಜರ್ ಹಾಗೂ ರಿಧಿ ವರ್ಷಿಣಿ ಅವರನ್ನು ಒಳಗೊಂಡಿರುವ ಭಾರತ ಮಹಿಳಾ ತಂಡವು ಟರ್ಕಿ ವಿರುದ್ಧ ಪ್ರಬಲ ಪ್ರದರ್ಶನ ನೀಡಿತು.
ಕುಶಾಲ್ ದಲಾಲ್, ಸಾಹಿಲ್ ಚೌಧರಿ ಹಾಗೂ ನಿತಿನ್ ಅಪರ್ ಅವರನ್ನೊಳಗೊಂಡಿರುವ ಭಾರತದ ಕೆಡೆಟ್ ಪುರುಷರ ತಂಡವು ರೋಮಾಂಚಕ ಫೈನಲ್ನಲ್ಲಿ 233-231 ಅಂತರದಿಂದ ಅಗ್ರ ಶ್ರೇಯಾಂಕಿತ ಅಮೆರಿಕವನ್ನು ಸೋಲಿಸಿತು.
ಆಗಸ್ಟ್ 10 ರಂದು ಭಾರತೀಯ ಕಾಂಪೌಂಡ್ ಆರ್ಚರಿ ತಂಡದ ಹುಡುಗಿಯರು ಹಾಗೂ ಮಿಶ್ರ ತಂಡವು ಈಗ ನಡೆಯುತ್ತಿರುವ ವಿಶ್ವ ಆರ್ಚರಿ ಯೂತ್ ಚಾಂಪಿಯನ್ಶಿಪ್ನ ಅರ್ಹತಾ ಹಂತದಲ್ಲಿ ಎರಡು ಕಿರಿಯ (ಅಂಡರ್-18) ವಿಶ್ವ ದಾಖಲೆಗಳನ್ನು ಮುರಿದರು.