ಸ್ವಾತಂತ್ರ್ಯದ ಅಮೃತ ಮಹೋತ್ಸವ; ಟ್ಯಾಲೆಂಟ್ ನಿಂದ 75 ಧಾರ್ಮಿಕ ಕೇಂದ್ರಗಳಿಗೆ ಸಸಿ ವಿತರಣೆ ಯೋಜನೆ

ಮಂಗಳೂರು, ಆ.14: ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಲ್ಲಿ 75 ಧಾರ್ಮಿಕ ಕೇಂದ್ರಗಳಿಗೆ ಸಸಿಗಳನ್ನು ನೀಡುವ ಮಹತ್ತರವಾದ ಯೋಜನೆಯನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಹಮ್ಮಿಕೊಂಡಿದೆ.
ಆ.15ರಂದು ಭಾರತವು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಕೋವಿಡ್-19 ನಿಯಂತ್ರಣದ ಹಿನ್ನೆಲೆಯಲ್ಲಿ ಅಧಿಕ ಜನರು ಒಂದೇ ಕಡೆ ಸೇರಿಕೊಳ್ಳದಂತೆ ಸರಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಟಿಆರ್‌ಎಫ್ ಪರಿಸರಕ್ಕೆ ಆದ್ಯತೆ ನೀಡುವ ಹೊಸ ಯೋಜನೆಯನ್ನು ಈ ಬಾರಿ ಕೈಗೆತ್ತಿಕೊಂಡಿದೆ. ಅದರಂತೆ ಮಸೀದಿ, ಮಂದಿರ, ಚರ್ಚ್ ಹೀಗೆ 75 ಧಾರ್ಮಿಕ ಕೇಂದ್ರಗಳಿಗೆ ಗಿಡಗಳನ್ನು ವಿತರಿಸಲು ಮುಂದಾಗಿದೆ.
ಈಗಾಗಲೆ ಟಿಆರ್‌ಎಫ್ ಸುಂದರ ಪರಿಸರ ನಿರ್ಮಾಣಕ್ಕಾಗಿ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆಯೂ ಆಗಿದೆ. ಈ ನಿಟ್ಟಿನಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ದ.ಕ.ಜಿಲ್ಲೆಯ 75 ಧಾರ್ಮಿಕ ಕೇಂದ್ರಗಳಿಗೆ ಸಸಿಗಳನ್ನು ವಿತರಿಸುವ ಮೂಲಕ 75ನೆ ಸ್ವಾತಂತ್ರ್ಯವನ್ನು ಸಂಭ್ರಮದಿಂದ ಆಚರಿಸಲು ಮುಂದಾಗಿದೆ. ಇದಕ್ಕಿಂತ ಮುಂಚೆ ಧಾರ್ಮಿಕ ಕೇಂದ್ರಗಳಿಗೆ ನೀಡಿದ ಸಸಿಗಳಿಂದ ಫಲ ಸಿಕ್ಕಿವೆ. ಧಾರ್ಮಿಕ ಕೇಂದ್ರಗಳಿಗೆ ಆದಾಯವೂ ಬರುವಂತಾಗಿದೆ ಎಂದು ಟಿಆರ್‌ಎಫ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ತಿಳಿಸಿದ್ದಾರೆ.
ಸಸಿ ನೆಡಲು ಆಸಕ್ತಿಯಿರುವ ಧಾರ್ಮಿಕ ಕೇಂದ್ರಗಳಿಗೆ ಸಂಬಂಧಪಟ್ಟವರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಯೆನೆಪೊಯ ನರ್ಸಿಂಗ್ ಹೋಮ್ ಎದುರುಗಡೆ, ಕಂಕನಾಡಿ, ಮಂಗಳೂರು ಮೊ.ಸಂ: 9972283365, 9591412400 ಇಮೇಲ್ : trfmangalore@gmail.comನ್ನು ಸಂಪರ್ಕಿಸಬಹುದು ಎಂದು ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ತಿಳಿಸಿದ್ದಾರೆ.







