ನೂತನ ಐಟಿ ನಿಯಮ-2021ರ ಕೆಲವು ನಿಬಂಧನೆಗಳಿಗೆ ಬಾಂಬೆ ಹೈಕೋರ್ಟ್ ತಡೆ

ಮುಂಬೈ,ಆ.14: ನೂತನ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ನಿಯಮಾವಳಿಯಲ್ಲಿ ವಿಧಿಸಲಾಗಿರುವ ‘ನೀತಿ ಸಂಹಿತೆ’ಯನ್ನು ಡಿಜಿಟಲ್ ಸುದ್ದಿ ಮಾಧ್ಯಮಗಳು ಮತ್ತು ಪ್ರಕಾಶಕರು ಪಾಲಿಸುವುದನ್ನು ಕಡ್ಡಾಯಗೊಳಿಸಿರುವ 9(1) ಮತ್ತು 9(3) ನಿಬಂಧನೆಗಳಿಗೆ ಬಾಂಬೆ ಉಚ್ಚ ನ್ಯಾಯಾಲಯವು ಶನಿವಾರ ತಡೆಯನ್ನು ನೀಡಿದೆ.
ಕಾನೂನು ಸುದ್ದಿ ಜಾಲತಾಣ ‘ದಿ ಲೀಫ್ಲೆಟ್’ ಮತ್ತು ಪತ್ರಕರ್ತ ನಿಖಿಲ್ ವಾಗ್ಳೆ ಅವರು ನೂತನ ಐಟಿ ನಿಯಮಗಳ ವಿರುದ್ಧ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಈ ತಡೆಯು ಈ ಇಬ್ಬರು ಅರ್ಜಿದಾರರಿಗೆ ಮಾತ್ರ ಸೀಮಿತವಾಗಿದೆ ಎಂದು ಮುಖ್ಯ ನ್ಯಾಯಾಧೀಶ ದೀಪಂಕರ್ ದತ್ತಾ ಮತ್ತು ನ್ಯಾ,ಜಿ.ಎಸ್.ಕುಲಕರ್ಣಿ ಅವರ ಪೀಠವು ಸ್ಪಷ್ಟಪಡಿಸಿತು.
ತಡೆ ಹಿಡಿಯಲಾಗಿರುವ ನಿಬಂಧನೆಗಳು ಮೇಲ್ನೋಟಕ್ಕೆ ಸಂವಿಧಾನದ ವಿಧಿ 19ರಡಿ ಖಾತರಿಪಡಿಸಲಾಗಿರುವ ವಾಕ್ ಸ್ವಾತಂತ್ರದ ಹಕ್ಕುಗಳನ್ನು ಉಲ್ಲಂಘಿಸಿವೆ ಮತ್ತು ಐಟಿ ಕಾಯ್ದೆಗೂ ವಿರುದ್ಧವಾಗಿವೆ ಎಂದು ಪೀಠವು ಬೆಟ್ಟು ಮಾಡಿತು. ಸಮಗ್ರ ನಿಯಮಾವಳಿಗೆ ತಡೆಯನ್ನು ನೀಡಿಲ್ಲ ಎಂದು ಅದು ತಿಳಿಸಿತು. ನೂತನ ನಿಯಮಾವಳಿಗಳನ್ನು ಐಟಿ ಕಾಯ್ದೆಯಡಿ ರೂಪಿಸಲಾಗಿದೆ. ಆದರೆ ಅರ್ಜಿದಾರರು ತಕರಾರು ಎತ್ತಿದ್ದ 14 ಮತ್ತು 16ನೇ ನಿಬಂಧನೆಗಳಿಗೆ ತಡೆಯಾಜ್ಞೆಯನ್ನು ನೀಡಲು ಪೀಠವು ನಿರಾಕರಿಸಿತು.
ನಿಬಂಧನೆ 14 ಡಿಜಿಟಲ್ ಮಾಧ್ಯಮಗಳ ಮೇಲ್ವಿಚಾರಣೆ ವ್ಯವಸ್ಥೆಯಾಗಿ ಅಂತರ್-ಇಲಾಖಾ ಸಮಿತಿಯ ರಚನೆಯನ್ನು ಅಗತ್ಯವಾಗಿಸಿದೆ, ಆದರ ಇಂತಹ ಸಮಿತಿ ಈವರೆಗೂ ರಚನೆಯಾಗಿಲ್ಲ ಎಂದ ನ್ಯಾಯಾಲಯವು,ಈ ವಿಷಯವನ್ನು ತಕ್ಷಣವೇ ಕೈಗೆತ್ತಿಕೊಳ್ಳುವ ತುರ್ತು ಅಗತ್ಯ ಸದ್ಯಕ್ಕಿಲ್ಲ. ನಿಬಂಧನೆ 16 ಪ್ರಕಟಿತ ವಿಷಯವನ್ನು ತಡೆಹಿಡಿಯುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಿದೆ ಮತ್ತು ಇಂತಹುದೇ ನಿಬಂಧನೆಗಳು 2009ರ ಮಧ್ಯಂತರ ನಿಯಮಾವಳಿಯಲ್ಲಿಯೂ ಇದ್ದವು,ಆದರೆ ಆಗ ಅರ್ಜಿದಾರರು ಅವುಗಳನ್ನು ಪ್ರಶ್ನಿಸಿರಲಿಲ್ಲ ಎಂದು ಹೇಳಿತು.
ಪೀಠವು ಶುಕ್ರವಾರ ಈ ವಿಷಯದಲ್ಲಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು,ಆದರೆ ನೂತನ ನಿಯಮಾವಳಿಯನ್ನು ಹೊರಡಿಸುವ ಅಗತ್ಯವೇನಿತ್ತು ಎಂದು ಸರಕಾರವನ್ನು ಪ್ರಶ್ನಿಸಿತ್ತು.
ನೂತನ ನಿಯಮಾವಳಿಯಲ್ಲಿನ ಹಲವಾರು ನಿಬಂಧನೆಗಳಿಗೆ ಆಕ್ಷೇಪಗಳನ್ನು ಎತ್ತಿದ್ದ ಅರ್ಜಿದಾರರು,ಇವು ಸಂವಿಧಾನವು ಖಾತರಿ ಪಡಿಸಿರುವ ಪ್ರಜೆಗಳ ವಾಕ್ ಸ್ವಾತಂತ್ರದ ಹಕ್ಕಿಗೆ ಚ್ಯುತಿಯನ್ನುಂಟು ಮಾಡುವ ಸಾಧ್ಯತೆಯಿದೆ ಎಂದು ವಾದಿಸಿದ್ದರು.
ನೂತನ ಐಟಿ ನಿಯಮಾವಳಿಯು ಸಂವಿಧಾನವನ್ನು ಮತ್ತು ಐಟಿ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ದೂರಿ ಹಲವಾರು ಮಾಧ್ಯಮ ಸಂಸ್ಥೆಗಳು ದೇಶಾದ್ಯಂತ ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ಸಲ್ಲಿಸಿವೆ.







