ತಮ್ಮ ಹುಟ್ಟಿನ ಬಗ್ಗೆ ಸಂಶಯ ಇರುವವರು ವೀರ್ ಸಾವರ್ಕರ್ ಯಾರೆಂದು ಕೇಳುತ್ತಾರೆ: ಸಿ.ಟಿ. ರವಿ ಅವಹೇಳನಕಾರಿ ಹೇಳಿಕೆ

ಚಿಕ್ಕಮಗಳೂರು, ಆ.14: ಯಾರಿಗೆ ತನ್ನ ತಂದೆ ಯಾರೆಂಬ ಬಗ್ಗೆ ಅನುಮಾನ ಇರುತ್ತದೋ ಅಂತಹವರು ಮಾತ್ರ ವೀರ್ ಸಾವರ್ಕರ್ ಯಾರೆಂದು ಪ್ರಶ್ನಿಸುತ್ತಾರೆ ಎನ್ನುವ ಮೂಲಕ ಸಿ.ಟಿ. ರವಿ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಅವಹೇಳನಕಾರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದಿರಾ ಕ್ಯಾಂಟಿನ್ ಸಂಬಂಧ ಸಿ.ಟಿ.ರವಿ ಅವರು ಮಾಜಿ ಪ್ರಧಾನಿ ನೆಹರೂ ಬಗ್ಗೆ ಮಾಡುತ್ತಿರುವ ಟೀಕೆಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಸಂಬಂಧ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ್ ಸಾವರ್ಕರ್ ಎರಡು ಕರಿನೀರಿನ ಶಿಕ್ಷೆಗೆ ಒಳಗಾದವರು. ಎರಡು ಬಾರಿ ಜೀವಾವಧಿ ಶಿಕ್ಷೆಗೆ ಒಳಗಾದವರು. ಇದರ ಬಗ್ಗೆ ಗೊತ್ತಿಲ್ಲದವರಿಗೆ ತಮ್ಮ ಹುಟ್ಟಿನ ಬಗ್ಗೆಯೂ ಸಂಶಯ ಇರುತ್ತದೆ. ಇಂತಹವರಿಂದ ಮಾತ್ರ ವೀರ್ ಸಾವರ್ಕರ್ ಯಾರು ಎಂದು ಕೇಳಲು ಸಾಧ್ಯ ಎಂದು ಅವಹೇಳನಕಾರಿಯಾಗಿ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್‍ನವರು ನೆಹರೂ ಅವರ ವೈರುಧ್ಯಗಳನ್ನು ಮುಚ್ಚಿಕೊಳ್ಳಲು ಅಟಲ್ ಜೀ ಹೆಸರು ಮುನ್ನಲೆಗೆ ತರುತ್ತಿದ್ದಾರೆ. ನೆಹರೂ ಹುಕ್ಕಾ ಸೇದುತ್ತಿರುವ ನೂರಾರು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಗುತ್ತವೆ. ಅಟಲ್ ಬಿಹಾರಿ ವಾಜಪೇಯಿ ಅವರ ಇಂತಹ ಒಂದೇ ಒಂದು ಫೋಟೊ ತೋರಿಸಲಿ. ಅವರು ಅಜಾತಶತ್ರು, ರಾಷ್ಟ್ರೀಯ ಹಿತಕ್ಕಾಗಿ ಬದುಕಿದವರು. ಅವರು ಬದುಕಿದ್ದಾಗ, ಸತ್ತ ನಂತರವೂ ವಿವಾದಕ್ಕೊಳಗಾಗಲಿಲ್ಲ. ಈಗ ನೆಹರೂ ಅವರ ವೈಪರೀತ್ಯಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್‍ನವರು ಅಟಲ್ ಹೆಸರನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಈ ಮೂಲಕ ನೆಹರೂ ಬಗೆಗಿನ ಚರ್ಚೆ, ಆರೋಪಗಳನ್ನು ಕಾಂಗ್ರೆಸ್‍ನವರು ಒಪ್ಪಿಕೊಂಡಂತಾಗಿದೆ ಎಂದ ಅವರು, ಕಾಂಗ್ರೆಸ್ ಮುಖಂಡರಲ್ಲಿ ವಸ್ತುನಿಷ್ಠ ಸಮರ್ಥನೆಗೆ ವಿಷಯಗಳಿಲ್ಲದಿದ್ದಾಗ ನಿಂದನೆಗೆ ಇಳಿಯುತ್ತಾರೆ ಎಂದು ಆರೋಪಿಸಿದರು.
ರಾಜಸ್ಥಾನದಲ್ಲಿ ವಸುಂಧರಾ ರಾಜೆ ಅವರು ಬಡವರಿಗೆ ಅನ್ನ ನೀಡುವ ಉದ್ದೇಶದಿಂದ ಅನ್ನಪೂರ್ಣೇಶ್ವರಿ ಕ್ಯಾಂಟಿನ್‍ಅನ್ನು ತೆರೆದಿದ್ದರು. ಕಾಂಗ್ರೆಸ್‍ನವರು ಅದರ ಹೆಸರನ್ನು ಇಂದಿರಾ ಕ್ಯಾಂಟಿನ್ ಎಂದು ಬದಲಾಯಿಸಿದ್ದಾರೆ ಎಂದ ಅವರು, ಕಾಂಗ್ರೆಸ್‍ನವರಿಗೆ ಅನ್ನಪೂರ್ಣೇಶ್ವರಿ ಎಂಬ ಹೆಸರನ್ನು ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಇಂದಿರಾ ರಸೋಯಿಘರ್ ಎಂದು ಹೆಸರು ಬದಲಾಯಿಸಿದ್ದಾರೆ. ಕಾಂಗ್ರೆಸ್ ಹಿಂದಿನ ಕಾಂಗ್ರೆಸ್ ಆಗಿ ಉಳಿದಿಲ್ಲ. ಇಟಲಿ ಕಾಂಗ್ರೆಸ್ ಆಗಿದೆ ಎಂದರು.
ವಸ್ತುನಿಷ್ಠ ಚರ್ಚೆ, ಸತ್ಯಕ್ಕೆ ಬೆಂಬಲದ ಅವಶ್ಯಕತೆ ಇದೆ. ಸತ್ಯವನ್ನು ಪ್ರತಿಪಾದಿಸುವ ನನ್ನ ಕೆಲಸಕ್ಕೆ ಜನಬೆಂಬಲ ಇದ್ದೇ ಇರುತ್ತೇ. ನಾನು ಏನು ಮಾತನಾಡುತ್ತಿದ್ದೇನೋ ಅದಕ್ಕೆ ಆಧಾರವಿದೆ. ವಾಸ್ತವದ ನೆಲಗಟ್ಟಿನಲ್ಲೇ ಮಾತನಾಡುತ್ತಿದ್ದೇನೆ. ವಾಸ್ತವಿಕ ನೆಲೆಯಲ್ಲಿ ಸತ್ಯವನ್ನು ಎದುರಿಸಲಾಗದವರು ಕೀಳುಭಾಷೆಯನ್ನು ಉಪಯೋಗಿಸುತ್ತಿದ್ದಾರೆ ಎಂದರು.
ಸಿ.ಟಿ. ರವಿ ಸಾವಿರ ಕೋಟಿ ಒಡೆಯ ಎಂದು ಆರೋಪಿಸುತ್ತಿದ್ದಾರೆ. ಸಾವಿರ ಕೋಟಿ ಎಲ್ಲಿದೆ ಎಂಬುದನ್ನು ತೋರಿಸಿದಲ್ಲಿ ಅದನ್ನು ಮುಫತ್ತಾಗಿ ಹಂಚುತ್ತೇನೆ. ನಾನು ಲೋಕಾಯುಕ್ತಕ್ಕೆ ಆಸ್ತಿ ಸಂಬಂಧ ಪ್ರತೀ ವರ್ಷ ಯಾವ ದಾಖಲೆ ನೀಡಿದ್ದೇನೋ ಅದೇ ಸತ್ಯ. ಅದರ ಮೇಲೆ ಎಷ್ಟೇ ಹೆಚ್ಚು ಆಸ್ತಿ ಇದ್ದರೂ ದಾನ ಮಾಡುತ್ತೇನೆ. ಅವರ ಮೇಲಿನ ಅಕ್ರಮ, ಭ್ರಷ್ಟಾಚಾರದ ಆರೋಪ ಮುಚ್ಚಿಕೊಳ್ಳಲು ಕಾಂಗ್ರೆಸ್‍ನವರು ತನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದರು.
ಮಹಾತ್ಮ ಗಾಂಧೀಜಿ ಅವರು ನೈತಿಕತೆ ವಿಚಾರದಲ್ಲಿ ಪರಮೋಚ್ಛ ಸ್ಥಾನದಲ್ಲಿದ್ದರು. ಅವರು ನೆಹರೂ ಅವರನ್ನು ದೇಶದ ಪ್ರಥಮ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ ವಿಚಾರದಲ್ಲಿ ಸ್ವತಃ ಗಾಂಧೀಜಿ ಅವರಿಗೇ ಭಿನ್ನಾಭಿಪ್ರಾಯ ಇತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್‍ನವರ ಟೀಕೆಗಳನ್ನು ಗಮನಿಸಿದಾಗ ನನ್ನ ಅಭಿಪ್ರಾಯವನ್ನು ಅವರು ಒಪ್ಪಿಕೊಂಡಂತಾಗಿದೆ. ನನ್ನ ವಿಷಯದ ಬಗ್ಗೆ ಚರ್ಚೆ ಮಾಡಲು ಅವರ ಬಳಿ ಸರಕುಗಳಿಲ್ಲ. ಇದನ್ನು ಎದುರಿಸಲಾಗದವರು ನಿಂದನೆ ಮಾಡುತ್ತಿದ್ದಾರೆ. ಹುಕ್ಕಾ ಬಾರ್ ಬಗ್ಗೆ ಪ್ರಸ್ತಾಪ ಮಾಡಿರುವುದನ್ನು ದಾಖಲೆಗಳನ್ನು ಆಧರಿಸಿ ಹೇಳಿದ್ದೇನೆ. ನನ್ನ ಬಗ್ಗೆ ಅವಾಚ್ಯ ಶಬ್ಧಗಳನ್ನು ಬಳಸುವವರ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಸತತ ಸೋಲಿನಿಂದಾಗಿ ಕಾಂಗ್ರೆಸ್ ಮುಖಂಡರಿಗೆ ಹುಚ್ಚು ಹಿಡಿದಿದೆ.
- ಸಿ.ಟಿ. ರವಿ







