ರಾಯಭಾರ ಸಿಬ್ಬಂದಿ ತೆರವುಗೊಳಿಸಲು ಕಾಬೂಲ್ ಗೆ ಅಮೆರಿಕ ಸೈನಿಕರ ಆಗಮನ

ಕಾಬೂಲ್ (ಅಫ್ಘಾನಿಸ್ತಾನ), ಆ. 14: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ರಾಯಭಾರ ಕಚೇರಿಯ ಸಿಬ್ಬಂದಿ ಮತ್ತು ಇತರ ನಾಗರಿಕರನ್ನು ತೆರವುಗೊಳಿಸುವುದಕ್ಕಾಗಿ ಅಮೆರಿಕದ ಪಡೆಗಳು ಕಾಬೂಲ್ ಗೆ ಪ್ರಯಾಣಿಸಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ದೇಶದ ಎರಡನೇ ಮತ್ತು ಮೂರನೇ ಅತಿ ದೊಡ್ಡ ನಗರಗಳನ್ನು ತಾಲಿಬಾನ್ ಭಯೋತ್ಪಾದಕರು ವಶಪಡಿಸಿಕೊಂಡ ಒಂದು ದಿನದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಎರಡು ಮರೀನ್ ಬೆಟಾಲಿಯನ್ಗಳು ಮತ್ತು ಒಂದು ಪದಾತಿ ಬೆಟಾಲಿಯನ್ ರವಿವಾರ ಸಂಜೆಯ ವೇಳಗೆ ಕಾಬೂಲ್ನಲ್ಲಿ ಇಳಿಯಲಿವೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಹೇಳಿದೆ. ಈ ಮೂರು ಬೆಟಾಲಿಯನ್ಗಳಲ್ಲಿ ಸುಮಾರು 3,000 ಸೈನಿಕರಿದ್ದಾರೆ.
‘‘ಅವರು ಬಂದಿದ್ದಾರೆ, ನಾಳೆಯವರೆಗೂ ಅವರು ಬರುತ್ತಿರುತ್ತಾರೆ’’ ಎಂದು ಅಮೆರಿಕದ ಅಧಿಕಾರಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.
ಪದಾತಿ ಬ್ರಿಗೇಡ್ ನ ಸಮರ ತಂಡವೂ ನಾರ್ತ್ ಕ್ಯಾರಲೈನದ ಫೋರ್ಟ್ ಬ್ರ್ಯಾಗ್ನಿಂದ ಕುವೈತ್ಗೆ ಹೊರಟಿದೆ. ಅಗತ್ಯ ಬಿದ್ದರೆ ಕಾಬೂಲ್ನ ಭದ್ರತೆಗಾಗಿ ಕ್ಷಿಪ್ರ ಕಾರ್ಯ ಪಡೆಯಾಗಿ ಅದು ಕಾರ್ಯನಿರ್ವಹಿಸಲಿದೆ ಎಂದು ಪೆಂಟಗನ್ ಹೇಳಿದೆ.
ತಾಲಿಬಾನ್ ಉಗ್ರರಿಗೆ ಪ್ರತಿರೋಧ ಒಡ್ಡುವ ಅಫ್ಘಾನ್ ಸೈನಿಕರ ಸಾಮರ್ಥ್ಯ ಕುಂದುತ್ತಿದ್ದು, ಉಗ್ರರು ಇನ್ನು ಕೆಲವೇ ದಿನಗಳಲ್ಲಿ ಕಾಬೂಲ್ ವಶಪಡಿಸಿಕೊಳ್ಳಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ಇತರ ಕೆಲವು ಪಾಶ್ಚಿಮಾತ್ಯ ದೇಶಗಳೂ ಅಫ್ಘಾನಿಸ್ತಾನಕ್ಕೆ ಸೈನಿಕರನ್ನು ಕಳುಹಿಸಿವೆ.
ಅಫ್ಘಾನ್ನಲ್ಲಿ 20 ವರ್ಷಗಳ ಯುದ್ಧದ ಬಳಿಕ ಅಮೆರಿಕ ಮತ್ತು ನ್ಯಾಟೋ ಪಡೆಗಳು ಅಲ್ಲಿಂದ ತೆರಳುತ್ತಿರುವಂತೆಯೇ, ದಕ್ಷಿಣ ಅಫ್ಘಾನಿಸ್ತಾನದ ಆರ್ಥಿಕ ಕೇಂದ್ರ ಕಂದಹಾರ್ ತಾಲಿಬಾನ್ ನಿಯಂತ್ರಣದಲ್ಲಿದೆ ಎಂದು ಅಫ್ಘಾನ್ ಸರಕಾರದ ಅಧಿಕಾರಿಯೊಬ್ಬರು ಶುಕ್ರವಾರ ಖಚಿತಪಡಿಸಿದ್ದಾರೆ.
ಕೆಲವು ರಾಯಭಾರ ಕಚೇರಿಗಳು ತೆರವುಗೊಳ್ಳುವ ಮುನ್ನ ಸೂಕ್ಷ್ಮ ವಸ್ತುಗಳನ್ನು ಸುಟ್ಟು ಹಾಕುತ್ತಿವೆ ಎಂದು ರಾಜತಾಂತ್ರಿಕರು ಹೇಳಿದ್ದಾರೆ.







