ಗಡಿ ಜಿಲ್ಲೆಗಳಲ್ಲಿ ವಾರಂತ್ಯದ ಕರ್ಫ್ಯೂ ಮುಂದುವರಿಕೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಗಡಿ ಜಿಲ್ಲೆಗಳ 10 ಕಿ.ಮೀ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆ

ಬೆಂಗಳೂರು, ಆ. 14: 'ಕೋವಿಡ್ ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು ಶಿವಮೊಗ್ಗ ಹಾಗೂ ಬೆಂಗಳೂರು ಗ್ರಾಮಾಂತರ ಸೇರಿದಂತೆ 8 ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಪ್ಪಿಸಲು ನೈಟ್ ಕರ್ಫ್ಯೂ ಮತ್ತು ವಾರಂತ್ಯದ ಕರ್ಫ್ಯೂ ಜಾರಿಯಲ್ಲಿರಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಶನಿವಾರ ಕೋವಿಡ್ ಸೋಂಕು ನಿಯಂತ್ರಣ ಸಂಬಂಧ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಚಿವರು, ತಜ್ಞರ ಉನ್ನತ ಮಟ್ಟದ ಸಮಿತಿ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕೇರಳ ಮತ್ತು ಮಹಾರಾಷ್ಟ್ರದ ಗಡಿ ಜಿಲ್ಲೆಗಳ 10 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಎಲ್ಲ ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆ ಮತ್ತು ಕೋವಿಡ್ ವ್ಯಾಕ್ಸಿನ್(ಲಸಿಕೆ) ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಅಧಿಕಾರಿಗಳು ಮತ್ತು ತಜ್ಞರ ಸಮಿತಿಯು ಬಹಳ ವೈಜ್ಞಾನಿಕ ಅಂಕಿ-ಅಂಶಗಳ ಸಮೇತವಾಗಿ ಕೋವಿಡ್‍ನ ಪರಿಸ್ಥಿತಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಜೊತೆಗೆ ನೆರೆಯ ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿನ ಕೋವಿಡ್ ಸ್ಥಿತಿಗತಿಗಳ ಬಗ್ಗೆ ತಿಳಿಸಿದ್ದಾರೆ. ಅವರ ಒಂದು ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಮ್ಮ ಮುಂದಿರುವಂತದ್ದು ಕೋವಿಡ್ ಅನ್ನು ಯಾವ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂಬುದಾಗಿದೆ ಎಂದು ಅವರು ತಿಳಿಸಿದರು.
ಎರಡಲೇ ಅಲೇ ಇನ್ನೂ ಹೋಗಿಲ್ಲ: `ಕೋವಿಡ್ ಎರಡನೆ ಅಲೆ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಈಗ ಅಲೆ ಕಡಿಮೆಯಾದರೂ ಸೋಂಕಿನ ದೃಢ ಪ್ರಮಾಣ ಪ್ರತಿನಿತ್ಯ 1,400 ರಿಂದ 1800ರ ವರೆಗೆ ವರದಿಯಾಗುತ್ತಿವೆ. ಹೀಗಾಗಿ ಮತ್ತಷ್ಟು ಜಾಗೃತಿ ಅಗತ್ಯವಿದೆ. ಕೋವಿಡ್ ಪರೀಕ್ಷೆ ಜೊತೆಗೆ ಎಲ್ಲರಿಗೂ ಲಸಿಕೆ ಕೊಡಿಸಲು ಸರಕಾರ ಕ್ರಮ ವಹಿಸಲಿದೆ. ಜನರು ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು' ಎಂದು ಅವರು ಸೂಚಿಸಿದರು.
ಪರೀಕ್ಷೆ ಹೆಚ್ಚಳ: ರಾಯಚೂರು, ಬಳ್ಳಾರಿ, ಕಲಬುರಗಿ, ಬೀದರ್, ಕೊಪ್ಪಳ, ಹಾವೇರಿ, ಚಿಕ್ಕಮಗಳೂರು, ತುಮಕೂರು, ವಿಜಯಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊರೋನ ಪರೀಕ್ಷೆಗಳನ್ನು ಹೆಚ್ಚು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ರಾಜ್ಯದಲ್ಲಿ ಕೋವಿಡ್ ಮತ್ತು ಡೆಲ್ಟಾ ವೈರಸ್ ಸೋಂಕಿನ ರೂಪಾಂತರದ ಬಗ್ಗೆ ಅಧ್ಯಯನಕ್ಕೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಕಲಬುರಗಿ, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಜಿನೋಮಿಕ್ ಲ್ಯಾಬ್‍ಗಳನ್ನು ಇನ್ನು ಮೂರು ವಾರಗಳಲ್ಲಿ ಆರಂಭಿಸಲಾಗುವುದು ಎಂದರು.
ಲಸಿಕೆಗೆ ಬೇಡಿಕೆ: ಈಗಾಗಲೇ ರಾಜ್ಯದಲ್ಲಿ 4 ಕೋಟಿಯಷ್ಟು ಲಸಿಕೆ ನೀಡಲಾಗಿದೆ. ಪ್ರಸ್ತುತ ಇಂದು ನಮ್ಮ ಬಳಿ 14.89 ಲಕ್ಷ ಕೋವಿಡ್ ಲಸಿಕೆ ದಾಸ್ತಾನು ಇದೆ. ಈ ತಿಂಗಳು ಸುಮಾರು 30 ಲಕ್ಷ ಲಸಿಕೆ ಬರಲಿದೆ. ಮುಂದಿನ ವಾರ ಹೊಸದಿಲ್ಲಿಗೆ ನಾನು ಮತ್ತು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ತೆರಳಲಿದ್ದು, ಮಾಸಿಕ 65 ಲಕ್ಷದಿಂದ 1 ಕೋಟಿಯಷ್ಟು ಲಸಿಕೆ ಒದಗಿಸಲು ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗುವುದು. ಇದರಿಂದ ಲಸಿಕಾಕರಣ ತ್ವರಿತಗೊಳಿಸಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಆಯುಕ್ತರಿಗೆ ಅಧಿಕಾರ: ಬೆಂಗಳೂರು ನಗರದಲ್ಲಿ ಕೊರೋನ ನಿಯಂತ್ರಣಕ್ಕಾಗಿ ಮಕ್ಕಳಿಗೆ ಮಾರಕವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಆಸ್ಪತ್ರೆಗಳಲ್ಲಿ ಐಸಿಯು ಮತ್ತು ಹಾಸಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ. ಕೋವಿಡ್ ಪಾಸಿಟಿವಿಟಿ ದರವನ್ನು ನೋಡಿಕೊಂಡು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಆಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಸದ್ಯ 0.75ರಷ್ಟು ಪಾಸಿಟಿವಿಟಿ ದರ ಇದ್ದು, ಅದು ಶೇ.2ಕ್ಕಿಂತ ಹೆಚ್ಚಾದರೆ ಕಠಿಣ ಕ್ರಮ ವಹಿಸಲಿದ್ದಾರೆ. ಅಲ್ಲದೆ ಬೆಂಗಳೂರು ನಗರಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಿದ್ದಾರೆ. ಅಲ್ಲದೆ, ಪ್ರತಿನಿತ್ಯ ಕೋವಿಡ್ ಪರಿಸ್ಥಿತಿಯನ್ನು ಆಯುಕ್ತರೇ ಅವಲೋಕನ ಮಾಡಲಿದ್ದಾರೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಕೋವಿಡ್ ಎರಡನೆ ಅಲೇ ಇನ್ನೂ ಇರುವ ಕಾರಣ ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಡಾ.ಸುದರ್ಶನ್, ಡಾ.ದೇವಿಶೆಟ್ಟಿ ಸೇರಿದಂತೆ ತಜ್ಞರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
"ಕೇರಳ ಸರಕಾರ ಅಲ್ಲಿನ ಹೈಕೋರ್ಟ್‍ನಲ್ಲಿ ಕೇಸು ಹಾಕುವ ಬದಲು ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಕೇರಳ ಸರಕಾರ ಹೂಡಿರುವ ಪ್ರಕರಣವನ್ನು ನಾನು ಕಾನೂನಾತ್ಮಕವಾಗಿ ಎದುರಿಸಲಿದ್ದೇವೆ. ಆರ್‍ಟಿಪಿಸಿಆರ್ ಪರೀಕ್ಷೆಗೆ ಒತ್ತಾಯ ಮಾಡುತ್ತಿದ್ದೇವೆಂದು ಅವರು ಕೇಸು ಹಾಕಿದ್ದಾರೆ. ಮೊದಲನೆ ಅಲೆ ಕೇರಳದಿಂದಲೇ ಆರಂಭವಾಗಿದೆ. ಎರಡಲೆ ಅಲೆಯೂ ಆ ರಾಜ್ಯದಲ್ಲೇ ಹೆಚ್ಚಿದೆ. ಅವರು ಕೋವಿಡ್ ಸೋಂಕು ನಿಯಂತ್ರಣ ಮಾಡಬೇಕು. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಜನರ ಜೀವ ಮತ್ತು ಆರೋಗ್ಯ ರಕ್ಷಣೆ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ'
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ







