ಮಾನಸಿಕ ದುರ್ಬಲ ಮತ್ತು ಸಂಕಷ್ಟದಲ್ಲಿರುವ ಮಕ್ಕಳ ನೆರವಿಗೆ ಸಂವಾದ್ ವೇದಿಕೆ: ಸ್ಮೃತಿ ಇರಾನಿ

ಬೆಂಗಳೂರು, ಆ.14: ಇದೇ ಮೊದಲ ಬಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗು ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ – ನಿಮ್ಹಾನ್ಸ್ ನಂತಹ ಪ್ರಮುಖ ಸಂಸ್ಥೆ ಜತೆಯಾಗಿ ಸೇರಿ ಮಾನಸಿಕ ದುರ್ಬಲ ಹಾಗು ಸಂಕಷ್ಟದಲ್ಲಿರುವ ಮಕ್ಕಳಿಗೆ ಸಲಹೆ ಮತ್ತು ಬೆಂಬಲ ನೀಡುವ ವೇದಿಕೆಯಾಗಿ 'ಸಂವಾದ್' ರೂಪುಗೊಂಡಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೆಳಿದರು.
ನಿಮ್ಹಾನ್ಸ್-ನರವಿಜ್ಞಾನ ಸಂಸ್ಥೆಯ 'SAMVAD- Support, Advocacy, & Mental health interventions for children in Vulnerable circumstances and Distress - 'ಸಂವಾದ್' ಒಂದು ವರ್ಷ ಪೂರೈಸಿದ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಂವಾದ್ ಒಂದು ಆಡಳಿತಾತ್ಮಕ ಸೇತುವಾಗಿದ್ದು, ವರ್ಷ ಪೂರೈಸಿದ ಈ ಸಂದರ್ಭದ ಆಚರಣೆ ಅತ್ಯಗತ್ಯ ಎಂದರು.
ಸಂವಾದ್ ಪ್ರಯತ್ನವು ದೇಶದ ಕರ್ತವ್ಯನಿರತ ಒಂದು ಲಕ್ಷ ಜನರಿಗೆ ನೆರವಾಗಿದ್ದು, ಪರಿಣಾಮ ಬೀರಿದೆ. ಸಂವಾದ್ ಅನ್ನು ದೇಶದಾದ್ಯಂತದ ಅಪೇಕ್ಷಿತ ಜಿಲ್ಲೆಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಮಾನಸಿಕ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಮತ್ತು ತಳಮಟ್ಟದಲ್ಲಿ ಸೇವಾ ಪೂರೈಕೆಯನ್ನು ಸುಧಾರಿಸಲು ಪಂಚಾಯತಿ ರಾಜ್ ವ್ಯವಸ್ಥೆಗಳೊಂದಿಗೆ ಸೇರಿ ಮಕ್ಕಳ ರಕ್ಷಣೆ ಮತ್ತು ಮಾನಸಿಕ ಆರೊಗ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಮುಂದಾಗಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯೋತ್ಸವದ ಮುನ್ನಾ ದಿನ, ಮಾನಸಿಕ ಆರೋಗ್ಯ ಬೆಂಬಲ ದೊರಕುವುದನ್ನು ಖಾತ್ರಿಪಡಿಸುವುದು ಅನನ್ಯ ಉಪಕ್ರಮವಾಗಿದೆ ಎಂದು ಹೇಳಿದರು. ಮಹಿಳೆಯರು ಮತ್ತು ಮಾನಸಿಕ ಆರೋಗ್ಯ ಕುರಿತಂತೆಯೂ ಸಂಸ್ಥೆಯೊಂದಿಗಿನ ನಂಟನ್ನು ಮತ್ತಷ್ಟು ಬಲಪಡಿಸುವ ಕುರಿತಂತೆಯೂ ಅವರು ಮಾತನಾಡಿದರು.
ಸಂವಾದ್ ಕೇವಲ ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಕರ್ತವ್ಯ ನಿರತರೊಂದಿಗೆ ಮಾತ್ರವೇ ಕಾರ್ಯ ನಿರ್ವಹಿಸುತ್ತಿಲ್ಲ, ಜೊತೆಗೆ ಸಂಶೋಧನೆ ಮತ್ತು ಕೌಟುಂಬಿಕ ದೌರ್ಜನ್ಯ ಮದ್ಯಪಾನ ಮೊದಲಾದುವುಗಳಿಂದ ಇಡೀ ಕುಟುಂಬ ಅನುಭವಿಸುವ ಆಘಾತ ಮತ್ತು ಅದರ ಪರಿಣಾಮದ ಕುರಿತೂ ಕೆಲಸ ಮಾಡುತ್ತಿದೆ. ಸಚಿವಾಲಯವು ಈ ಎಲ್ಲ ಉಪಕ್ರಮಗಳಿಗೆ ಬೆಂಬಲವಾಗಿ ನಿಂತಿದೆ ಎಂದು ಸ್ಮೃತಿ ಇರಾನಿ ತಿಳಿಸಿದರು.
ನಿಮ್ಹಾನ್ಸ್ ನ ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಶೇಖರ್ ಶೇಷಾದ್ರಿ ಸಂವಾದ್ ಕುರಿತು ವಿವರ ನೀಡಿ, ಎರಡನೇ ವರ್ಷದಲ್ಲಿ ಸಂವಾದ್ ದೇಶಾದ್ಯಂತ ಮಕ್ಕಳ ಸಂರಕ್ಷಣೆಯ ಅಗತ್ಯಗಳನ್ನು ಪೂರೈಸಲು ಇನ್ನೂ ಹೆಚ್ಚು ಕೆಲಸ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ನಿಮ್ಹಾನ್ಸ್ ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.








