ರಾಹುಲ್ ರತ್ತ ಬಾಟಲಿ ಮುಚ್ಚಳವನ್ನು ಬಿಸಾಡಿದ ಕಿಡಿಗೇಡಿ ಇಂಗ್ಲೆಂಡ್ ಕ್ರಿಕೆಟ್ ಪ್ರೇಕ್ಷಕರು

ಲಂಡನ್: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಲಂಡನ್‌ನ ಲಾರ್ಡ್ಸ್ ಸ್ಟ್ಯಾಂಡ್‌ನಿಂದ ಕಿಡಿಗೇಡಿ ಕ್ರಿಕೆಟ್ ಪ್ರೇಕ್ಷಕರು ಭಾರತದ ಬ್ಯಾಟ್ಸ್ ಮನ್ ಕೆ.ಎಲ್. ರಾಹುಲ್ ಅವರತ್ತ ಚಿಕ್ಕ ವಸ್ತುಗಳನ್ನು ವಿಶೇಷವಾಗಿ ಶಾಂಪೇನ್ ಬಾಟಲಿಗಳ ಮುಚ್ಚಳವನ್ನು ಬಿಸಾಡಿ ಅಶಿಸ್ತಿನಿಂದ ವರ್ತಿಸಿದ್ದಾರೆ.
69 ನೇ ಓವರ್‌ನಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೊ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಮುಹಮ್ಮದ್ ಶಮಿ 69ನೇ ಓವರ್‌ನ ನಾಲ್ಕನೇ ಚೆಂಡು ಎಸೆದ ನಂತರ, ಸ್ಟ್ಯಾಂಡ್‌ನಿಂದ ಇಂಗ್ಲಿಷ್ ಅಭಿಮಾನಿಗಳು ಬೌಂಡರಿ ಹಗ್ಗಗಳ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ರಾಹುಲ್ ಮೇಲೆ ಶಾಂಪೇನ್ ಬಾಟಲಿಗಳ ಮುಚ್ಚಳವನ್ನು ಎಸೆದಿದ್ದಾರೆ.
ಇದನ್ನು ನೋಡಿ ಕೋಪಗೊಂಡ ಭಾರತೀಯ ನಾಯಕ ವಿರಾಟ್ ಕೊಹ್ಲಿ, ಅದನ್ನು ಮೈದಾನದಿಂದ ಹೊರಹಾಕುವಂತೆ ಕೆಎಲ್ ರಾಹುಲ್ ಗೆ ಸನ್ನೆ ಮಾಡಿದರು.
ಭಾರತ ಕ್ರಿಕೆಟ್ ತಂಡವು ಮೈದಾನದ ಅಂಪೈರ್‌ಗಳಾದ ಮೈಕೆಲ್ ಗೌಗ್ ಹಾಗೂ ರಿಚರ್ಡ್ ಇಲ್ಲಿಂಗ್‌ವರ್ತ್ ಅವರೊಂದಿಗೆ ಘಟನೆಯ ಬಗ್ಗೆ ಚರ್ಚಿಸಿತು.