ಎರಡನೇ ಟೆಸ್ಟ್: ರೂಟ್ ಆಕರ್ಷಕ ಶತಕ, ಇಂಗ್ಲೆಂಡ್ 391 ರನ್ ಗೆ ಆಲೌಟ್

ಲಂಡನ್: ನಾಯಕ ಜೋ ರೂಟ್ ಭರ್ಜರಿ ಶತಕದ(180)ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಎರಡನೇ ಟೆಸ್ಟ್ ನ ಮೂರನೇ ದಿನದಾಟವಾದ ಶನಿವಾರ ತನ್ನ ಮೊದಲ ಇನಿಂಗ್ಸ್ ನಲ್ಲಿ 391 ರನ್ ಗಳಿಸಿ ಆಲೌಟಾಗಿದೆ. ಮೊದಲ ಇನಿಂಗ್ಸ್ ನಲ್ಲಿ ಕೇವಲ 27 ರನ್ ಮುನ್ನಡೆ ಪಡೆದಿದೆ.
3 ವಿಕೆಟ್ ನಷ್ಟಕ್ಕೆ 119 ರನ್ ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಪರ ಬ್ಯಾಟಿಂಗ್ ಮುಂದುವರಿಸಿದ ರೂಟ್ ಹಾಗೂ ಜಾನಿ ಬೈರ್ ಸ್ಟೋವ್ (57)4ನೇ ವಿಕೆಟ್ ಗೆ 121 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಬೈರ್ ಸ್ಟೋವ್ ಔಟಾದ ಬಳಿಕ ಜೋಸ್ ಬಟ್ಲರ್(23) ಅವರೊಂದಿಗೆ ಕೈಜೋಡಿಸಿದ ರೂಟ್ 5ನೇ ವಿಕೆಟ್ ಗೆ 54 ರನ್ ಹಾಗೂ ಆಲ್ ರೌಂಡರ್ ಮೊಯಿನ್ ಅಲಿ(27) ಅವರೊಂದಿಗೆ 6ನೇ ವಿಕೆಟ್ ಗೆ 58 ರನ್ ಸೇರಿಸಿ ತಂಡ 391 ರನ್ ಗಳಿಸಲು ನೆರವಾದರು.
321 ಎಸೆತಗಳನ್ನು ಎದುರಿಸಿರುವ ರೂಟ್ 18 ಬೌಂಡರಿಗಳ ಸಹಿತ ಔಟಾಗದೆ 180 ರನ್ ಗಳಿಸಿದರು. ರೂಟ್ ಸರಣಿಯಲ್ಲಿ ಸತತ 2ನೇ ಹಾಗೂ ಒಟ್ಟಾರೆ 22ನೇ ಶತಕ ಸಿಡಿಸಿ ಸಂಭ್ರಮಿಸಿದರು. ಭಾರತದ ಪರ ವೇಗದ ಬೌಲರ್ ಗಳಾದ ಮುಹಮ್ಮದ್ ಸಿರಾಜ್ (4-94) , ಇಶಾಂತ್ ಶರ್ಮಾ(3-69) ಹಾಗೂ ಮುಹಮ್ಮದ್ ಶಮಿ(2-95) 9 ವಿಕೆಟ್ ಗಳನ್ನು ಹಂಚಿಕೊಂಡಿದ್ದಾರೆ.





