ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಜವಾಬ್ದಾರಿ ಹೆಚ್ಚಿದೆ: ಯೋಗೇಶ್ ಮಾಸ್ಟರ್

ಯೋಗೇಶ್ ಮಾಸ್ಟರ್
ಬೆಂಗಳೂರು, ಆ. 15: `ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಜವಾಬ್ದಾರಿ ಹೆಚ್ಚಿದ್ದು, ಮಕ್ಕಳ ಮಾನಸಿಕ, ದೈಹಿಕ ಆರೋಗ್ಯವನ್ನು ಅರಿತುಕೊಳ್ಳುವಲ್ಲಿ ಪೋಷಕರು ಹೆಚ್ಚಿನ ಆಸಕ್ತಿಯನ್ನು ವಹಿಸಬೇಕು' ಎಂದು ಲೇಖಕ ಯೋಗೇಶ್ ಮಾಸ್ಟರ್ ತಿಳಿಸಿದ್ದಾರೆ.
ರವಿವಾರ ನಗರದ ಕತ್ರಿಗುಪ್ಪೆಯ ಪಿ.ಶೇಷಾದ್ರಿ ಸ್ಟುಡಿಯೋದಲ್ಲಿ ಅಪಾರ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಲೇಖಕ ದರುಶನ ಅವರ `ಪೋಷಕತ್ವ ಮತ್ತದರ ತತ್ವ' ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದ ಅವರು, `ಮಕ್ಕಳನ್ನು ಪಡೆದ ಮಾತ್ರಕ್ಕೆ ಪೋಷಕರಾಗುವುದಿಲ್ಲ. ಮಕ್ಕಳನ್ನು ಬಾಲ್ಯಾವಸ್ಥೆ, ಪ್ರೌಢಾವಸ್ತೆಯನ್ನು ಅರಿತುಕೊಂಡು, ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಮಾನಸಿಕ ಸ್ಥಿತಿಗತಿಗಳ ಕುರಿತ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮಕ್ಕಳ ಬಾಲ್ಯಾವಸ್ಥೆಯಲ್ಲಿ ಬಹುತೇಕ ಪೋಷಕರು ನಿರ್ಲಕ್ಷ್ಯವಹಿಸುತ್ತಾರೆ. ದೊಡ್ಡವರಾದ ಮೇಲೆ ಕಲಿತುಕೊಳ್ಳುತ್ತಾನೆ, ಮುಂದಿನ ದಿನಗಳಲ್ಲಿ ಅವರಿಗೆ ಅರ್ಥವಾಗುತ್ತದೆಯೆಂದು ಮಕ್ಕಳನ್ನು ತಿದ್ದದೆ, ಅರ್ಥಮಾಡಿಸದ ಬಿಟ್ಟುಬಿಡುತ್ತಾರೆ. ಆದರೆ, ಬಾಲ್ಯಾವಸ್ಥೆಯಲ್ಲಿದ್ದ ದೋಷಗಳು, ತಪ್ಪು ನಡುವಳಿಕೆಗಳು ಹಾಗೆಯೇ ಮುಂದುವರೆಯುತ್ತದೆ. ದೊಡ್ಡವರಾದ ಮೇಲೆ ತಪ್ಪುಗಳನ್ನು ತಿದ್ದುಕೊಳ್ಳುವುದು ತುಂಬಾನೆ ಕಷ್ಟ ಪಡಬೇಕಾಗುತ್ತದೆ. ಹೀಗಾಗಿ ಪೋಷಕರು ಮಕ್ಕಳನ್ನು ಬಾಲ್ಯಾವಸ್ಥೆಯಲ್ಲಿಯೇ ತಿದ್ದಬೇಕೆಂದು ಅವರು ಹೇಳಿದ್ದಾರೆ.
ಬೆಂಗಳೂರಿನ ನಿಮ್ಹಾನ್ಸ್ ಆಡಳಿತಾಧಿಕಾರಿ ಎಸ್.ವೆಂಕಟೇಶ್ ಮಾತನಾಡಿ, `ಪೋಷಕತ್ವದ ಪ್ರಜ್ಞೆಯು ಪ್ರಾಣಿ-ಪಕ್ಷಿಗಳಲ್ಲಿಯೂ ಇದೆ. ಪ್ರಾಣಿ ಅಥವಾ ಪಕ್ಷಿಯು ತನ್ನ ಮರಿಗಳನ್ನು ಹೇಗೆ ಬೆಳೆಸಬೇಕು, ಹೇಗೆ ತನ್ನನ್ನು ತಾನು ಸಂರಕ್ಷಿಸಿಕೊಳ್ಳಬೇಕು ಎಂಬುದರ ಜಾಣ್ಮೆಯನ್ನು ನೀಡುತ್ತವೆ. ಆದರೆ, ಮನುಷ್ಯ ಮಾತ್ರ ಮಕ್ಕಳನ್ನು ಬೆಳಸುವ ಬಗ್ಗೆ ಚಿಂತನೆ ಮಾಡುವುದು ಕಡಿಮೆ. ಮಕ್ಕಳ ಪೋಷಕತ್ವವು ಮನುಷ್ಯರಲ್ಲೇ ಸಮಸ್ಯೆಯಾಗಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಚಿಂತನೆಯನ್ನು ಪ್ರೇರೇಪಿಸುವ ಕೃತಿ `ಪೋಷಕತ್ವ ಮತ್ತದರ ತತ್ವ' ಎಂದು ಅಭಿಪ್ರಾಯಪಟ್ಟರು.
ಅವಿಭಕ್ತ ಕುಟುಂಬದಲ್ಲಿ ಮಕ್ಕಳ ಪೋಷಕತ್ವಕ್ಕೆ ಸಂಬಂಧಿಸಿದಂತೆ ಜವಾಬ್ದಾರಿಯು ಹರಿದು ಹಂಚಿ ಹೋಗಿರುತ್ತದೆ. ಮಕ್ಕಳನ್ನು ನೋಡಿಕೊಳ್ಳುವುದು ಸಮಸ್ಯೆಯಾಗದು. ಆದರೆ, ಇಂದು ಕೂಡು ಕುಟುಂಬಗಳಿಲ್ಲ. ಆದ್ದರಿಂದ, ಮಕ್ಕಳ ಪೋಷಡಾಕತ್ವದ ಹೊಣೆಗಾರಿಕೆ ಕುರಿತು ಚಿಂತನೆ ನಡೆಸುವುದು ಕ್ಷಣಕ್ಷಣದ ಸತ್ಯವಾಗಿದೆ. ಮಕ್ಕಳನ್ನು ದಾಯಾದಿಗಳನ್ನಾಗಿ ಮಾಡದಿರುವುದೂ ಸಹ ಪೋಷಕತ್ವದ ಹೊಣೆಗಾರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ಲೇಖಕ ಸೂರ್ಯಕೀರ್ತಿ ಮಾತನಾಡಿ, `ಮಕ್ಕಳನ್ನು ಅತಿಯಾಗಿ ಪ್ರೀತಿಸುವುದು ಹಾಗೂ ತಿರಸ್ಕರಿಸುವುದು ಎರಡೂ ತಪ್ಪು. ಈ ಎಚ್ಚರವು ಪೋಷಕತ್ವದ ಪಾಲನೆಯಲ್ಲಿದೆ ಎಂಬ ಅರಿವು ಈ ಕೃತಿಯಲ್ಲಿದೆ' ಎಂದು ಹೇಳಿದರು. ಈ ವೇಳೆ ಲೇಖಕ ದರುಶನ ಉಪಸ್ಥಿತರಿದ್ದರು.
`ಲೈಂಗಿಕ ಶಿಕ್ಷಣದ ಮೂಲ ಉದ್ದೇಶವೆಂದರೆ ಕಣ್ಣು-ಕಿವಿಗಳಂತೆ ಗುಪ್ತಾಂಗಗಳ ಕುರಿತು ಪೋಷಕರು ಮಕ್ಕಳಿಗೆ ಮಾಹಿತಿ ನೀಡಬೇಕು. ಅದಕ್ಕೆ ಪೂರಕವಾಗಿ ಶಿಕ್ಷಣ ಇರಬೇಕು ಎಂಬ ಆಶಯ ಲೈಂಗಿಕ ಶಿಕ್ಷಣದಲ್ಲಿದೆ. ನಮ್ಮ ದೇಹದ ಪ್ರತಿ ಅಂಗಗಳ ಕಾರ್ಯ ಚಟುವಟಿಕೆಗಳ ಕುರಿತು, ಅವುಗಳ ಹಿಂದಿನ ಉದ್ದೇಶಗಳನ್ನು ಅರಿಯುವುದು ಅಶ್ಲೀಲ ಹೇಗಾಗುತ್ತದೆ?'
-ಯೋಗೇಶ್ ಮಾಸ್ಟರ್, ಲೇಖಕ







