ಕೆಂಪು ಕೋಟೆಯಲ್ಲಿ ಧ್ವಜಾರೋಹಣದ ಬಳಿಕ ಹೂಮಳೆಗೆರೆದ ಐಎಎಫ್ ಹೆಲಿಕಾಪ್ಟರ್ ಗಳು

ಹೊಸದಿಲ್ಲಿ, ಆ. 15: ಸ್ವಾತಂತ್ರ್ಯ ದಿನಾಚರಣೆಯ ಪ್ರಮಖ ಸ್ಥಳವಾದ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ಧ್ವಜಾರೋಹಣ ಮಾಡಿದ ಬಳಿಕ ಮೊದಲ ಬಾರಿಗೆ ಭಾರತೀಯ ವಾಯು ಪಡೆ (ಐಎಎಫ್)ಯ ಎರಡು ಹೆಲಿಕಾಪ್ಟರ್ಗಳು ಹೂಮಳೆಗರೆಯಿತು. ಹೆಲಿಕಾಪ್ಟರ್ ಗಳು ಹೂ ಮಳೆ ಗೆರೆಯುತ್ತಿದ್ದಂತೆ ಸೇರಿದ್ದ ಜನರು ಕರತಾಡನ ಹಾಗೂ ಹರ್ಷೋದ್ಘಾರ ಮಾಡಿದರು.
ಮೊದಲ ಹೆಲಿಕಾಪ್ಟರ್ ಅನ್ನು ವಿಗ್ ಕಮಾಂಡರ್ ಬಲದೇವ್ ಸಿಂಗ್ ಬಿಸ್ಟ್ ನಿಯಂತ್ರಿಸಿದರೆ, ಎರಡನೇ ಹೆಲಿಕಾಪ್ಟರ್ ಅನ್ನು ವಿಂಗ್ ಕಮಾಂಡರ್ ನಿಖಿಲ್ ಮೆಹ್ರೋತ್ರಾ ನಿಯಂತ್ರಿಸಿದರು. ಹೆಲಿಕಾಪ್ಟರ್ಗಳು ಹೂಮಳೆಗರೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಟೋಕಿಯೊ ಒಲಿಂಪಿಕ್ಸ್ನಲ್ಲಿ ದೇಶದ ಗೌರವವನ್ನು ಮೆರೆಸಿದ 32 ಅಥ್ಲೀಟ್ ಗಳು ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ)ದ ಇಬ್ಬರು ಅಧಿಕಾರಿಗಳು ಸ್ವಾತಂತ್ರ ದಿನಾಚರಣೆಯಲ್ಲಿ ಪಾಲ್ಗೊಂಡರು.
ಅವರಲ್ಲಿ ಜಾವ್ಲಿನ್ ಎಸೆತದಲ್ಲಿ ದೇಶಕ್ಕೆ ಐತಿಹಾಸಿಕ ಗೆಲವು ತಂದು ಕೊಟ್ಟ ನೀರಜ್ ಚೋಪ್ರಾ ಕೂಡ ಇದ್ದರು. ಶುಭಾಂಶು ಶರ್ಮಾ ಅವರು ತ್ರಿವರ್ಣ ಬಲೂನ್ಗಳನ್ನು ಆಕಾಶದಲ್ಲಿ ತೇಲಿ ಬಿಟ್ಟಿರುವುದು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು. ಕಾರ್ಯಕ್ರಮದಲ್ಲಿ ಹಾಜರಿದ್ದ ರಿತಿಕ್ ಜೋಷಿ ಐಎಎಫ್ನ ಹೆಲಿಕಾಪ್ಟರ್ ಗಳು ಹೂಮಳೆ ಸುರಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಪ್ರತಿಯೊಬ್ಬರ ಮೇಲೂ ಹೂವಿನ ದಳಗಳು ಬೀಳುವ ರಮಣೀಯ ದೃಶ್ಯಕ್ಕೆ ನಾವು ಸಾಕ್ಷಿಯಾದೆವು. ಕಮಾಂಡರ್ಗಳಿಗೆ ನಾವು ಸೆಲ್ಯೂಟ್ ಮಾಡಿದೆವು ಎಂದಿದ್ದಾರೆ.
ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಗ್ಯ ಕಾರ್ಯಕರ್ತರಂತಹ ಕೊರೋನ ವಾರಿಯರ್ ಗಳನ್ನು ಗೌರವಿಸಲು ಕೆಂಪು ಕೋಟೆಯ ಪ್ರಾಕಾರದ ದಕ್ಷಿಣ ಬದಿಯಲ್ಲಿ ಪ್ರತ್ಯೇಕ ಬ್ಲಾಕ್ ರಚಿಸಲಾಗಿತ್ತು.







