ಪ್ರಧಾನಿ ಅವರು ಕಳೆದ 7 ವರ್ಷಗಳಿಂದ ಒಂದೇ ಭಾಷಣ ಮಾಡುತ್ತಿದ್ದಾರೆ: ಕಾಂಗ್ರೆಸ್

ಹೊಸದಿಲ್ಲಿ, ಆ. 15: ಸ್ವಾತಂತ್ರ ದಿನಾಚರಣೆಯ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಯೋಜನೆಗಳ ಕುರಿತು ಘೋಷಣೆಗಳನ್ನು ಮಾತ್ರ ಮಾಡುತ್ತಿದ್ದಾರೆ. ಅವುಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ಅಲ್ಲದೆ, ರೈತರು ಪ್ರತಿಭಟನೆಗೆ ಕಾರಣವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಕೂಡ ಹಿಂಪಡೆಯುತ್ತಿಲ್ಲ ಎಂದು ಕಾಂಗ್ರೆಸ್ ರವಿವಾರ ಆರೋಪಿಸಿದೆ. ದೇಶ ಕಳೆದ 7 ವರ್ಷಗಳಿಂದ ಪ್ರಧಾನಿ ಅವರ ಒಂದೇ ಭಾಷಣವನ್ನು ಕೇಳುತ್ತಿದೆ. ಆದರೆ, ಸಣ್ಣ ರೈತರು ಸೇರಿದಂತೆ ಯಾವುದೇ ದುರ್ಬಲ ವರ್ಗಕ್ಕೆ ಏನನ್ನೂ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
‘‘ಅವರು ನೂತನ ಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ, ಅದು ಎಂದಿಗೂ ಅನುಷ್ಠಾನಗೊಳ್ಳುವುದಿಲ್ಲ. ಅವರು ಹಲವು ವಿಷಯಗಳನ್ನು ಹೇಳಿದ್ದಾರೆ. ಆದರೆ, ಅದಕ್ಕೆ ಎಂದಿಗೂ ಬದ್ಧರಾಗಿರುವುದಿಲ್ಲ. ಈಗ ಅವರು ಮೂರು ಕೃಷಿ ಕಾಯ್ದೆಗಳನ್ನು ತರುವ ಮೂಲಕ ರೈತರ ವಿನಾಶ ಆರಂಭಿಸಿದ್ದಾರೆ’’ ಎಂದು ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ ದಿನಾಚರಣೆಯ ಭಾಷಣದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಸಣ್ಣ ರೈತರ ಹಾಗೂ ಅಭಿವೃದ್ದಿ ಸಮಸ್ಯೆಗಳ ಕುರಿತು ಹಿಂದಿನ ಸರಕಾರವನ್ನು ಗುರಿ ಮಾಡುವ ಪ್ರಧಾನಿ ಅವರನ್ನು ತರಾಟೆಗೆ ತೆಗೆದುಕೊಂಡ ಖರ್ಗೆ, ಕೆಂಪು ಕೋಟೆ ಪ್ರಾಂಗಣದಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಮತ್ತೆ ಟೀಕಿಸುವ ಮೂಲಕ ದೇಶ ಪ್ರಗತಿ ಸಾಧಿಸದು ಎಂದರು. ರೈತರಿಗೆ ನೀರಾವರಿ ವ್ಯವಸ್ಥೆ ಪೂರೈಸುವಂತಹ ಹಲವು ಕೆಲಸಗಳನ್ನು ಕಾಂಗ್ರೆಸ್ ತನ್ನ ಆಡಳಿತ ಅವಧಿಯಲ್ಲಿ ಮಾಡಿದೆ. ಯುಪಿಎ ಸರಕಾರ ಅಧಿಕಾರದಲ್ಲಿ ಇರುವಾಗ ಮನಮೋಹನ್ ಸಿಂಗ್ ಸೋನಿಯಾ ಗಾಂಧಿ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಅವರು ಹೇಳಿದರು.
ಮೂಲಭೂತ ಸೌರ್ಯ ಕ್ಷೇತ್ರಕ್ಕೆ 100 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯನು ಟೀಕಿಸಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಅವರು ಪ್ರಧಾನಿ ಅವರು ಕಳೆದ ವರ್ಷಗಳಿಂದ ಇದನ್ನೇ ಹೇಳುತ್ತಿದ್ದಾರೆ ಎಂದರು.







