ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಹಿಂಸಾಚಾರ: ಶಿಲ್ಲಾಂಗ್ ನಲ್ಲಿ ಕರ್ಫ್ಯೂ ಜಾರಿ, ಇಂಟರ್ನೆಟ್ ಸ್ಥಗಿತ

ಫೋಟೊ ಕೃಪೆ: NDTV
ಶಿಲ್ಲಾಂಗ್, ಆ. 15: ಸ್ವಾತಂತ್ರ್ಯ ದಿನಾಚರಣೆಯಂದು ಮೇಘಾಲಯದ ರಾಜಧಾನಿ ಶಿಲ್ಲಾಂಗ್ ಹಾಗೂ ಇತರ ಹಲವು ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಶಿಲ್ಲಾಂಗ್ ನಲ್ಲಿ ಕರ್ಫ್ಯೂ ಹೇರಲಾಗಿದೆ ಹಾಗೂ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಆಗಸ್ಟ್ 17ರ ವರೆಗೆ ಕರ್ಫ್ಯೂ ಮಂದುವರಿಯಲಿದೆ ಎಂದು ರಾಜ್ಯ ಸರಕಾರದ ಆದೇಶ ತಿಳಿಸಿದೆ.
ಶಿಲ್ಲಾಂಗನ ಜೆಯವ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ವೌಕಿನ್ರೋಹ್ ಪೊಲೀಸ್ ಹೊರಠಾಣೆಯ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ವಾಹನದಲ್ಲಿದ್ದ ಹೊರಠಾಣೆಯ ಉಸ್ತುವಾರಿ ಅಧಿಕಾರಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಪೊಲೀಸರಿಗೆ ಶಸ್ತ್ರಾಸ್ತ್ರ ತೋರಿಸಿ ಬೆದರಿಸಿ ವಾಹನವನ್ನು ವಶಕ್ಕೆ ಪಡೆದು ಚಲಾಯಿಸಿಕೊಂಡ ಹೋದ ವ್ಯಕ್ತಿಗಳ ಗುಂಪು, ಅನಂತರ ಆ ವಾಹನಕ್ಕೆ ಬೆಂಕಿ ಹಚ್ಚಿತು ಎಂದು ಮೂಲಗಳು ತಿಳಿಸಿವೆ.
ಮನೆಯೊಂದಕ್ಕೆ ದಾಳಿ ನಡೆಸಿದ ಸಂದರ್ಭ ಮಾಜಿ ಬಂಡಾಯ ನಾಯಕ ಚೆರಿಸ್ಟ್ರಾಫೀಲ್ಡ್ ಥಂಗ್ಖೀವ್ ಅವರ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಶಿಲ್ಲಾಂಗ್ ನ ವಿವಿಧ ಭಾಗಗಳಲ್ಲಿ ಅಹಿತಕರ ಘಟನೆಗಳು ನಡೆಯಿತು. ಥಂಗ್ಖೀವ್ ಅವರನ್ನು ಪೊಲೀಸರು ದಾರುಣವಾಗಿ ಹತ್ಯೆಗೈದಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ. ರವಿವಾರ ನಡೆದ ಅವರ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ನೂರಾರು ಜನರು ಕಪ್ಪು ಉಡುಪು ಧರಿಸಿ, ಕಪ್ಪು ಬಾವುಟಗಳೊಂದಿಗೆ ಪಾಲ್ಗೊಂಡರು. ಹಿನ್ನೀವ್ಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ ನ ಮಾಜಿ ನಾಯಕನ ಸಾವಿನ ಬಗ್ಗೆ ರಾಜ್ಯ ಸರಕಾರ ನ್ಯಾಯಾಂಗ ತನಿಖೆ ನಡೆಸಲಿದೆ ಎಂದು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಶನಿವಾರ ಹೇಳಿದ್ದರು.







