ದೇಶದ ಮೊದಲ ‘ಮೇಡ್ ಇನ್ ಇಂಡಿಯಾ’ ವಿಮಾನವಾಹಕ ನೌಕೆ ಹೊರೆಯಲ್ಲ: ನೌಕಾಪಡೆ
ಹೊಸದಿಲ್ಲಿ,ಆ.15: ವಿಮಾನವಾಹಕ ನೌಕೆಗಳು ದೇಶದ ಪಾಲಿಗೆ ಹೊರೆಯಾಗಿವೆ ಎಂಬ ಹೇಳಿಕೆಗಳ ನಡುವೆಯೇ ಭಾರತೀಯ ನೌಕಾಪಡೆಯು, ಸಮುದ್ರ ಹಿತಾಸಕ್ತಿಯ ತನ್ನ ಪ್ರದೇಶಗಳಲ್ಲಿ ತನ್ನ ಉಪಸ್ಥಿತಿಯನ್ನು ಕಾಯ್ದುಕೊಳ್ಳಲು ಭಾರತಕ್ಕೆ ಕನಿಷ್ಠ ಮೂರು ವಿಮಾನವಾಹಕ ನೌಕೆಗಳು ಅಗತ್ಯವಾಗಿವೆ ಎಂದು ಭಾರತೀಯ ನೌಕಾಪಡೆಯು ಒತ್ತಿ ಹೇಳಿದೆ.
ಆಧುನಿಕ ವಿಮಾನವಾಹಕ ನೌಕೆಗಳು ಹೊರೆಯಾಗಿವೆ ಎಂಬ ವಿಶ್ಲೇಷಕರ ಹೇಳಿಕೆಗಳನ್ನು ಪ್ರಸ್ತಾಪಿಸಿದ ಕಮಾಂಡರ್ ವಿದ್ಯಾಧರ ಹರ್ಕೆ ಅವರು,ಇವೆಲ್ಲ ತಪ್ಪು ಕಲ್ಪನೆ ಅಥವಾ ಹೇಳಿಕೆಗಳಾಗಿವೆ ಎಂದು ಹೇಳಿದರು. ಹರ್ಕೆ ಭಾರತದ ಮೊದಲ ಮೇಡ್-ಇನ್-ಇಂಡಿಯಾ ವಿಮಾನವಾಹಕ ನೌಕೆ ‘ವಿಕ್ರಾಂತ್’ನ ನೇತೃತ್ವವನ್ನು ವಹಿಸಲಿದ್ದಾರೆ. ವಿಕ್ರಾಂತ್ನಂತಹ ವಿಮಾನವಾಹಕ ನೌಕೆಗಳು ಶತ್ರುದೇಶಗಳ ನೌಕಾಪಡೆಗಳ ಸೂಪರ್ಸಾನಿಕ್ ಮತ್ತು ಹೈಪರ್ಸಾನಿಕ್ ಹಡಗು ನಿರೋಧಕ ಕ್ಷಿಪಣಿಗಳಿಗೆ ಸುಲಭಭೇದ್ಯವಾಗಿವೆ ಎಂದು ಭದ್ರತಾ ವಿಶ್ಲೇಷಕ ಭರತ್ ಕಾರ್ನಾಡ್ ಅವರು ಕಳೆದ ವಾರ ಆನ್ಲೈನ್ ಲೇಖನವೊಂದರಲ್ಲಿ ಹೇಳಿದ್ದರು.
ಒಳಬರುವ ಹೈಪರ್ಸಾನಿಕ್ ಕ್ಷಿಪಣಿಗಳನ್ನು ತಡೆಯಬಲ್ಲ ರಕ್ಷಣಾ ವ್ಯವಸ್ಥೆಗಳು ಪ್ರಸ್ತುತ ಲಭ್ಯವಿಲ್ಲ ಎಂಬ ಅಭಿಪ್ರಾಯವನ್ನು ಕಾರ್ನಾಡ್ ಅವರ ವಾದವು ಆಧರಿಸಿತ್ತು. ಇದನ್ನು ತಿರಸ್ಕರಿಸಿದ ಹರ್ಕೆ,ವಿಮಾನವಾಹಕ ನೌಕೆಯಷ್ಟು ಉತ್ತಮವಾಗಿ ಪ್ರದೇಶದ ಮೇಲೆ ಪ್ರಾಬಲ್ಯ ಸಾಧಿಸುವ ಯಾವುದೇ ರಕ್ಷಣಾ ವೇದಿಕೆಗಳು ಸಮುದ್ರದಲ್ಲಿ ಇಲ್ಲ.
ವಿಮಾನವಾಹಕ ನೌಕೆಯು ಭೂಮಿ,ಸಾಗರದಲ್ಲಿಯ ನೌಕೆಗಳಿಂದ,ಜಲಾಂತರ್ಗಾಮಿ ಮತ್ತು ಆಗಸದಿಂದ ಯಾವುದೇ ಬೆದರಿಕೆಯನ್ನು ನಿವಾರಿಸಲು ಸಮರ್ಥವಾಗಿಸುತ್ತದೆ. ಸಮೀಪದಲ್ಲಿರುವ ಇತರ ಯುದ್ಧನೌಕೆಗಳು ವಿಮಾನವಾಹಕ ನೌಕೆಯೊಂದಿಗೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುತ್ತವೆ. ಹೀಗಾಗಿ ಇದು ಹೊರೆಯಲ್ಲ ಎಂದು ಪ್ರತಿಪಾದಿಸಿದರು.
ವಿಮಾನವಾಹಕ ನೌಕೆಗಳ ನಿರ್ಮಾಣ ಮತ್ತು ಕಾರ್ಯಾಚರಣೆ ವೆಚ್ಚದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗಿದೆ.
ಇತ್ತೀಚಿಗಷ್ಟೇ ಸಮುದ್ರದಲ್ಲಿ ತನ್ನ ಮೊದಲ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರೈಸಿರುವ ವಿಕ್ರಾಂತ್ ನೌಕೆಗೆ ಈವರೆಗೆ 23,000 ಕೋ.ರೂ.ವೆಚ್ಚವಾಗಿದೆ ಎಂದು ಹೇಳಲಾಗಿದೆ. ದೇಶದ ಉಭಯ ಕರಾವಳಿಗಳ ರಕ್ಷಣೆಗಾಗಿ ಎರಡು ಮತ್ತು ಮೀಸಲು ಸ್ಥಿತಿಯಲ್ಲಿರಿಸಲು ಒಂದು;ಹೀಗೆ ಮೂರು ವಿಮಾನವಾಹಕ ನೌಕೆಗಳು ತನಗೆ ಅಗತ್ಯವಾಗಿದೆ ಎಂದು ಭಾರತೀಯ ನೌಕಾಪಡೆಯು ದಶಕಗಳಿಂದಲೂ ವಾದಿಸುತ್ತಿದೆ. ಆದರೆ ಸರಕಾರವು ಈ ಬಗ್ಗೆ ಒಲವು ತೋರಿಸಿಲ್ಲ ಮತ್ತು ಮೂರನೇ ವಿಮಾನವಾಹಕ ನೌಕೆಯನ್ನು ಹೊಂದುವ ನೌಕಾಪಡೆಯ ಯೋಜನೆಯನ್ನು ಪಕ್ಕಕ್ಕೆ ತಳ್ಳಿದೆ,ಬದಲಿಗೆ ಆರು ಪರಮಾಣುಚಾಲಿತ ದಾಳಿ ಜಲಾಂತರ್ಗಾಮಿಗಳ ದೇಶಿಯ ನಿರ್ಮಾಣದ ಬಗ್ಗೆ ಗಮನವನ್ನು ಕೇಂದ್ರೀಕರಿಸಿದೆ.
ನೌಕಾಪಡೆಯು ತನ್ನ ಭರವಸೆಯನ್ನು ಕಳೆದುಕೊಂಡಿಲ್ಲ.
ಸಾವಿರಾರು ಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವ ಈ ವರ್ಗದ ಯುದ್ಧನೌಕೆಗಳ ನಿರ್ಮಾಣವನ್ನು ಬೆಂಬಲಿಸಲು ದೇಶದಲ್ಲಿ ಪರಿಸರ ವ್ಯವಸ್ಥೆಯೊಂದನ್ನು ನಿರ್ಮಿಸಲಾಗಿದೆ ಎಂದು ಅದು ಬೆಟ್ಟು ಮಾಡಿದೆ.
‘ನಾನಿದನ್ನು ವೆಚ್ಚವೆಂದು ಕರೆಯುವುದಿಲ್ಲ,ಹೂಡಿಕೆಯೆಂದು ಕರೆಯುತ್ತೇನೆ ಮತ್ತು ಅದು ನಮ್ಮ ಕೈಗಾರಿಕೆಗಳು,ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಿಗೆ ಮರಳಿ ಹರಿದುಬರುತ್ತದೆ ’ಎಂದು ಹೇಳಿದ ಸದರ್ನ್ ನೇವಲ್ ಕಮಾಂಡ್ನ ಕಮಾಂಡರ್ ಆಗಿರುವ ವೈಸ್ ಅಡ್ಮಿರಲ್ ಅನಿಲ್ ಚಾವ್ಲಾ ಅವರು,ಕೊಚ್ಚಿನ್ ಶಿಪ್ಯಾರ್ಡ್ ನಲ್ಲಿ ವಿಕ್ರಾಂತ್ ನ ನಿರ್ಮಾಣ ಕಾರ್ಯವು ಕಳೆದ ಕೆಲವು ವರ್ಷಗಳಲ್ಲಿ 40,000ಕ್ಕೂ ಅಧಿಕ ಭಾರತೀಯರಿಗೆ ಉದ್ಯೋಗಗಳನ್ನು ಒದಗಿಸಿದೆ. ಇಂದಿಗೂ ಅಲ್ಲಿ ಪ್ರತಿದಿನ 2,000 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಅಲ್ಲಿ ಸೃಷ್ಟಿಯಾಗಿರುವ ತಾಂತ್ರಿಕ ನೆಲೆಯು ತಂತ್ರಜ್ಞಾನಗಳನ್ನು ಉತ್ಪಾದಿಸುತ್ತದೆ ಮತ್ತು ಅವುಗಳನ್ನು ಹೊಸ ಅಪ್ಲಿಕೇಷನ್ಗಳಲ್ಲಿ ಬಳಸಬಹುದು ಹಾಗೂ ಇದು ನಮ್ಮ ಸ್ಥಳೀಯ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.







