ಇಂದು ರಾಜೀನಾಮೆ ಸಲ್ಲಿಸಲಿರುವ ಮಲೇಶ್ಯಾ ಪ್ರಧಾನಿ
ಕೌಲಲಾಂಪುರ, ಆ.15: ಆಡಳಿತಾರೂಢ ಮೈತ್ರಿಕೂಟದೊಳಗಿನ ಭಿನ್ನಮತದಿಂದ ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮಲೇಶ್ಯಾದ ಪ್ರಧಾನಿ ಮುಹಿದ್ದೀನ್ ಯಾಸಿನ್ ಸೋಮವಾರ(ಆ.16)ದಂದು ರಾಜೀನಾಮೆ ನೀಡಲಿದ್ದಾರೆ ಎಂದು ಮಲೇಶ್ಯಾದ ಸುದ್ಧಿಸಂಸ್ಥೆ ವರದಿ ಮಾಡಿದೆ.
ಸೋಮವಾರ ಸಚಿವ ಸಂಪುಟದ ವಿಶೇಷ ಸಭೆ ನಡೆಯಲಿದೆ. ಆ ಬಳಿಕ ಪ್ರಧಾನಿ ಯಾಸಿನ್ ದೊರೆ ಅಲ್ಸುಲ್ತಾನ್ ಅಬ್ದುಲ್ಲಾರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮಲೇಶ್ಯಾದ ಸಚಿವ ಮುಹಮ್ಮದ್ ಯೂಸುಫ್ ಹೇಳಿದ್ದಾರೆ. ರಾಜೀನಾಮೆ ಸ್ವೀಕೃತಗೊಂಡರೆ ಮಲೇಶ್ಯಾದಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ಉಂಟಾಗಲಿದೆ. 2020ರ ಮಾರ್ಚ್ನಲ್ಲಿ ಇತರ ಮೈತ್ರಿಪಕ್ಷಗಳ ಬೆಂಬಲದಿಂದ ಯಾಸಿನ್ ಸರಕಾರ ರಚಿಸಿದ್ದರು. ಆದರೆ ಇತ್ತೀಚೆಗೆ ಯುನೈಟೆಡ್ ಮಲೇಶ್ಯಾ ನ್ಯಾಷನಲ್ ಆರ್ಗನೈಸೇಷನ್ನ ಕೆಲವು ಸಂಸದರು ಬೆಂಬಲ ಹಿಂಪಡೆದಿರುವುದರಿಂದ ಸರಕಾರ ಅಲ್ಪಮತಕ್ಕೆ ಕುಸಿದಿತ್ತು.
ಕೊರೋನ ಸೋಂಕಿನಿಂದ ತತ್ತರಿಸಿರುವ ಮತ್ತು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಮಲೇಶ್ಯದಲ್ಲಿ ಯಾವ ರಾಜಕೀಯ ಪಕ್ಷವೂ ಸರಕಾರ ರಚಿಸಲು ಸಾಲುವಷ್ಟು ಬಹುಮತ ಹೊಂದಿಲ್ಲದ ಕಾರಣ, ಅಲ್ಲಿ ಚುನಾವಣೆ ನಡೆಯಲಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಅಲ್ಲಿನ ದೊರೆ ಅಲ್ ಸುಲ್ತಾನ್ ಅಬ್ದುಲ್ಲಾ ನಿರ್ಧರಿಸಬೇಕಿದೆ.





