ಮಂಜೇಶ್ವರ ಶಾಸಕ ಅಶ್ರಫ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ

ಉಳ್ಳಾಲ : ತಲಪಾಡಿ ಗಡಿ ಪ್ರದೇಶದಲ್ಲಿ ಆರ್ ಟಿ ಪಿ ಸಿ ಆರ್ ಕಡ್ಡಾಯ ಗೊಳಿಸಿದ ವಿರುದ್ಧ ಮಂಜೇಶ್ವರ ಶಾಸಕ ಅಶ್ರಫ್ ಅವರ ನೇತೃತ್ವದಲ್ಲಿ ಏಕದಿನ ಉಪವಾಸ ಸತ್ಯಾಗ್ರಹ ತಲಪಾಡಿ ಯಲ್ಲಿ ರವಿವಾರ ನಡೆಯಿತು.
ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮಾತನಾಡಿ, ಕಾಸರಗೋಡು ಜಿಲ್ಲೆಯ ಜನರು ಆಶ್ರಯಿಸುವುದು ಮಂಗಳೂರು ನಗರವನ್ನು. ಉನ್ನತ ಶಿಕ್ಷಣ ಕೇಂದ್ರ, ಹೈಟೆಕ್ ಆಸ್ಪತ್ರೆ ಇರುವುದು ಮಂಗಳೂರಿನಲ್ಲಿ. ಗಡಿನಾಡ ಕೇರಳಿಗರು ಶಿಕ್ಷಣ ಪಡೆಯಲು ಮಂಗಳೂರು ಕಡೆ ಹೋಗುತ್ತಾರೆ. ಆರೋಗ್ಯ ಸಮಸ್ಯೆ ಎದುರಾದರೆ ಮಂಗಳೂರು ನಲ್ಲಿ ರುವ ಆಸ್ಪತ್ರೆಯನ್ನು ಆಶ್ರಯಿಸುತ್ತಾರೆ. ಈ ಸಂದರ್ಭದಲ್ಲಿ ಕರ್ನಾಟಕ ಬಿಜೆಪಿ ಸರ್ಕಾರ ಗಡಿ ಬಂದ್ ಮಾಡಿ ಆರ್ ಟಿ ಸಿ ಆರ್ ಕಡ್ಡಾಯ ಮಾಡಿರುವುದು ಸರಿಯಲ್ಲ. ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ದೇಶ ವ್ಯಾಪ್ತಿ ಸಂಚಾರ ಮಾಡಲು ಅವಕಾಶ ಇದೆ. ಆದರೂ ಕೂಡಾ ಕರ್ನಾಟಕ ಬಿಜೆಪಿ ಸರ್ಕಾರ ಆರ್ ಟಿ ಸಿ ಆರ್ ಕಡ್ಡಾಯ ಮಾಡಿ ಗಡಿ ಬಂದ್ ಮಾಡಿರುವುದು ಕೇರಳಿಗರನ್ನು ಗಡಿ ಬಂಧನದಲ್ಲಿ ಇಟ್ಟಿದೆ ಎಂದು ಆರೋಪಿಸಿದರು.
ಮಂಜೇಶ್ವರ ಶಾಸಕ ಎ ಕೆಎಂ ಅಶ್ರಫ್ ಮಾತನಾಡಿ ಎರಡು ಡೋಸ್ ಪಡೆದವರಿಗೆ ಗಡಿ ಪ್ರವೇಶಕ್ಕೆ ಅವಕಾಶ ನೀಡಬೇಕು. ಈ ಹಿಂದೆ ಕೊರೊನ ಬಂದ್ ಆದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿತ್ತು. ಸುಪ್ರೀಂ ಕೋರ್ಟ್ ಗಡಿ ಬಂದ್ ತೆರೆದು ಕೊಡಬೇಕು ಎಂದು ಆದೇಶ ಕೂಡ ನೀಡಿತ್ತು. ಇದೀಗ ಮೂರನೇ ಅಲೆ ನೆಪದಲ್ಲಿ ಬೊಮ್ಮಾಯಿ ಸರ್ಕಾರ ದ್ವಂದ್ವ ನಿಲುವು ಅನುಸರಿಸುತ್ತಿದೆ. ಜಿಲ್ಲಾಡಳಿತ ಸರ್ಕಾರದ ಆದೇಶ ಎಂದು ಕೊಂಡು ಕೇರಳಿಗರಿಗೆ ತೊಂದರೆ ನೀಡಲಾರಂಭಿಸಿದೆ. ಇದರ ವಿರುದ್ಧ ಹಲವು ಹೋರಾಟ ಮಾಡಲಾಗಿದೆ. ಇದೀಗ ಉಪವಾಸ ಸತ್ಯಾಗ್ರಹ ಮೂಲಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ. ಗಡಿ ಸಮಸ್ಯೆ ಬಗೆಹರಿಸಲು ಕರ್ನಾಟಕ ಸರ್ಕಾರ ಒಮ್ಮತಕ್ಕೆ ಬಾರದಿದ್ದರೆ ಕೇರಳಿಗರ ಬೇಡಿಕೆ ಈಡೇರಿಸದಿದ್ದರೆ ನಿರಂತರ ಹೋರಾಟ ಮಾಡಲಿದ್ದೇವೆ. ಕೋರ್ಟ್ ಮೂಲಕ ನ್ಯಾಯಾಂಗ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುಡಿಎಫ್ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಮುಖಂಡ, ಮೂಸಾ ಸಾಹೇಬ್ ವಹಿಸಿದ್ದರು. ಲೀಗ್ ಯೂಸುಫ್ ಸಾಜಿದ್, ಅಬ್ದುಲ್ ಖಾದರ್, ಕೆಪಿಸಿಸಿ ಮುಖಂಡ ಸುಬ್ಬಯ್ಯ ರೈ, ಕಾಂಗ್ರೆಸ್ ನ ಮುನಾಫ್, ಅಝೀಝ್ ಉಳತ್ತೂರು, ಬಿಎಂಕೆ ಸೈಫುಲ್ಲಾ ತಂಙಳ್, ಮುಹಮ್ಮದ್ ಕಜೆ, ಯೋಗೀಶ್, ನಾಗೇಶ್, ಇರ್ಷಾದ್, ಮುಸ್ತಫಾ ಉದ್ಯಾವರ, ಯುವ ಕಾಂಗ್ರೆಸ್ ಮಂಡಲ ಮುಖಂಡ ರಾದ ಉಜಾರ್ ಪೃಥ್ವಿ ರಾಜ್ ಶೆಟ್ಟಿ, ಸಚ್ಚಿದಾನಂದ ರೈ, ಭರತ್ ರಾಜ್, ಮೋಹನ್ ರೈ ಮೊದಲಾದವರು ಉಪಸ್ಥಿತರಿದ್ದರು. ರಾಷ್ಟ್ರೀಯ ಕಾಂಗ್ರೆಸ್ ಮುಖಂಡ ಮಂಜುನಾಥ ಆಳ್ವ ಸ್ವಾಗತಿಸಿದರು.







.jpeg)



.jpeg)

