ತಾಲಿಬಾನ್ ಗೆ ಎಚ್ಚರಿಕೆ ನೀಡಿದ ಬೈಡೆನ್

ವಾಷಿಂಗ್ಟನ್, ಆ.15: ತಾಲಿಬಾನ್ ಗಳ ಕ್ಷಿಪ್ರಗತಿಯ ಮುನ್ನಡೆಯ ನಡುವೆಯೇ ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳನ್ನು ಹಿಂಪಡೆಯುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಅಫ್ಗಾನ್ನಿಂದ ಅಮೆರಿಕದ ಪ್ರಜೆಗಳು ಹಾಗೂ ರಾಜತಾಂತ್ರಿಕರನ್ನು ಕರೆಸಿಕೊಳ್ಳುವ ಪ್ರಕ್ರಿಯೆಗೆ ಅಡ್ಡಿಪಡಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
‘ಅಫ್ಗಾನ್ನಲ್ಲಿರುವ ಅಮೆರಿಕದ ಸಿಬ್ಬಂದಿ ಅಥವಾ ನಮ್ಮ ರಾಜತಾಂತ್ರಿಕ ನಿಯೋಗಕ್ಕೆ ಅಪಾಯ ಉಂಟುಮಾಡುವ ಯಾವುದೇ ಕೃತ್ಯ ನಡೆಸಿದರೆ ನಮ್ಮ ಸೇನೆಯಿಂದ ಕ್ಷಿಪ್ರ ಹಾಗೂ ಪ್ರಬಲ ಇದಿರೇಟು ಬೀಳಲಿದೆ’ ಎಂದು ಬೈಡೆನ್ ಎಚ್ಚರಿಸಿದ್ದಾರೆ. ರಾಷ್ಟ್ರೀಯ ಭದ್ರತಾ ದಳದೊಂದಿಗೆ ಸಮಾಲೋಚಿಸಿದ ಬಳಿಕ ಮಾತನಾಡಿದ ಅವರು , ಅಫ್ಗಾನ್ನಲ್ಲಿನ ನಮ್ಮ 20 ವರ್ಷದ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯ ಅಂಗವಾಗಿ, ಅಲ್ಲಿರುವ ನಮ್ಮ ಪ್ರಜೆಗಳು ಹಾಗೂ ಸಿಬ್ಬಂದಿಗಳನ್ನು ತೆರವುಗೊಳಿಸಲು ಸುಮಾರು 5,000 ಅಮೆರಿಕ ಯೋಧರು ನೆರವಾಗುತ್ತಿದ್ದಾರೆ ಎಂದರು.
ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ್ದ ಜೋ ಬೈಡೆನ್ ಅಫ್ಗಾನ್ನಿಂದ ಆಗಸ್ಟ್ 31ರೊಳಗೆ ಅಮೆರಿಕ ಸೇನೆ ವಾಪಸಾಗಲಿದೆ . ಅಫ್ಗಾನಿಸ್ತಾನದಲ್ಲಿ ಅಮೆರಿಕ ಪಡೆಗಳ ಉಪಸ್ಥಿತಿಯ ಬಳಿಕ ಅಧ್ಯಕ್ಷ ಪದವಿಗೇರಿದ 4ನೇ ವ್ಯಕ್ತಿ ನಾನು. ಈ ಯುದ್ಧವನ್ನು 5ನೇ ಅಧ್ಯಕ್ಷರಿಗೆ ವರ್ಗಾಯಿಸಲು ನಾನು ಬಯಸುವುದಿಲ್ಲ ಎಂದು ಘೋಷಿಸಿದ್ದರು.
ಇನ್ನೂ ಸುಮಾರು 30,000 ಅಮೆರಿಕನ್ನರು ಅಫ್ಗಾನಿಸ್ತಾನದಲ್ಲಿದ್ದಾರೆ ಎಂದು ಶನಿವಾರ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.







