ದ್ವಿತೀಯ ಟೆಸ್ಟ್: ರಹಾನೆ ಅರ್ಧಶತಕ, ಸಂಕಷ್ಟದಲ್ಲಿ ಭಾರತ

ಲಾರ್ಡ್ಸ್, ಆ.15: ಆತಿಥೇಯ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 391 ರನ್‌ಗೆ ನಿಯಂತ್ರಿಸಿ 2ನೇ ಇನಿಂಗ್ಸ್ ಆರಂಭಿಸಿರುವ ಭಾರತವು ರವಿವಾರ 4ನೇ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಸಂಕಷ್ಟದಲ್ಲಿದೆ. ಒಟ್ಟಾರೆ 154 ರನ್ ಮುನ್ನಡೆಯಲ್ಲಿದೆ.
ರಿಷಭ್ ಪಂತ್(14) ಹಾಗೂ ಇಶಾಂತ್ ಶರ್ಮಾ(4) ಕ್ರೀಸ್ ಕಾಯ್ದುಕೊಂಡಿದ್ದು, ಇಂಗ್ಲೆಂಡ್‌ಗೆ ಕೊನೆಯ ದಿನದಾಟದಲ್ಲಿ ಕಠಿಣ ಗುರಿ ನೀಡುವ ವಿಶ್ವಾಸದಲ್ಲಿದ್ದಾರೆ.
ಭಾರತದ ಆರಂಭಿಕ ಆಟಗಾರರಾದ ರಾಹುಲ್(5) ಹಾಗೂ ರೋಹಿತ್ ಶರ್ಮಾ(21) ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಇಂಗ್ಲೆಂಡ್ ನಾಯಕ ಜೋ ರೂಟ್‌ರಂತೆ ವಿರಾಟ್ ಕೊಹ್ಲಿ (20)ದೊಡ್ಡ ಮೊತ್ತ ಗಳಿಸಿ ತಂಡಕ್ಕೆ ಆಸರೆಯಾಗಲಿಲ್ಲ. ಭಾರತವು 55 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದಾಗ 4ನೇ ವಿಕೆಟ್ ಜೊತೆಯಾಟದಲ್ಲಿ 100 ರನ್ ಸೇರಿಸಿದ ಚೇತೇಶ್ವರ ಪೂಜಾರ(45, 206 ಎಸೆತ, 4 ಬೌಂ.) ಹಾಗೂ ಅಜಿಂಕ್ಯ ರಹಾನೆ (61 ರನ್,146 ಎಸೆತ, 5 ಬೌಂ.) ತಂಡಕ್ಕೆ ಆಸರೆಯಾದರು. ಈ ಇಬ್ಬರು ಬೇರ್ಪಟ್ಟ ಬಳಿಕ ಭಾರತವು ಮತ್ತೆ ಕುಸಿತದ ಹಾದಿ ಹಿಡಿಯಿತು.
ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದ ರಾಹುಲ್ (5 ರನ್,30 ಎಸೆತ)10ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ(21 ರನ್, 36 ಎಸೆತ)ಉತ್ತಮ ಟಚ್ ನಲ್ಲಿದ್ದಂತೆ ಕಂಡುಬಂದರೂ ಸರಣಿಯಲ್ಲಿ 2ನೇ ಬಾರಿ ಪುಲ್‌ಶಾಟ್ ಹೊಡೆತಕ್ಕೆ ಕೈಹಾಕಿ ಎಡವಿದರು. ವುಡ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ರೋಹಿತ್ ಅದೇ ಓವರ್‌ನಲ್ಲಿ ಮತ್ತೊಂದು ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡರು.





