ತಾಲಿಬಾನ್ ಜೊತೆಗಿನ ಸ್ನೇಹ ಸಂಬಂಧಕ್ಕೆ ಸಿದ್ಧ ಎಂದ ಚೀನಾ

photo: twitter
ಬೀಜಿಂಗ್ (ಚೀನಾ), ಆ. 16: ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದೊಂದಿಗಿನ ‘ಸ್ನೇಹಯುತ ಮತ್ತು ಸಹಕಾರಾತ್ಮಕ’ ಸಂಬಂಧವನ್ನು ಗಾಢಗೊಳಿಸಲು ಚೀನಾ ಸಿದ್ಧವಾಗಿದೆ ಎಂದು ಚೀನಾ ಸರಕಾರದ ವಕ್ತಾರರೊಬ್ಬರು ಸೋಮವಾರ ಹೇಳಿದ್ದಾರೆ. ಅಫ್ಘಾನಿಸ್ತಾನದ ನಿಯಂತ್ರಣವನ್ನು ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಂಡ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಅಫ್ಘಾನಿಸ್ತಾನದಿಂದ ಅಮೆರಿಕ ಸೈನಿಕರ ವಾಪಸಾತಿಯುದ್ದಕ್ಕೂ ತಾಲಿಬಾನ್ನೊಂದಿಗೆ ಅನಧಿಕೃತ ಸಂಬಂಧವನ್ನು ಹೊಂದಲು ಬೀಜಿಂಗ್ ಮುಂದಾಗಿತ್ತು. ಅಮೆರಿಕ ಸೈನಿಕರು ವಾಪಸಾಗುತ್ತಿರುವಂತೆಯೇ ತಾಲಿಬಾನ್ ಅಫ್ಘಾನಿಸ್ತಾನದ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಾ ಸಾಗಿತು ಹಾಗೂ ರವಿವಾರ ರಾಜಧಾನಿ ಕಾಬೂಲನ್ನು ವಶಪಡಿಸಿಕೊಂಡಿತು.
ಚೀನಾವು ಅಫ್ಘಾನಿಸ್ತಾನದೊಂದಿಗೆ 76 ಕಿಲೋಮೀಟರ್ ಗಳ ಗುಡ್ಡಗಾಡು ಗಡಿಯನ್ನು ಹೊಂದಿದೆ.
ಚೀನಾದ ಕ್ಸಿನ್ಜಿಯಾಂಗ್ನಲ್ಲಿರುವ ಉಯಿಘರ್ ಮುಸ್ಲಿಮ್ ಅಲ್ಪಸಂಖ್ಯಾತರಿಗೆ ಅಫ್ಘಾನಿಸ್ತಾನವು ಅಡಗುದಾಣವಾಗಬಹುದು ಎಂಬ ಆತಂಕವನ್ನು ಬೀಜಿಂಗ್ ಹಿಂದಿನಿಂದಲೂ ಹೊಂದಿತ್ತು. ಆದರೆ, ಕಳೆದ ತಿಂಗಳು ಟಿಯಾನ್ಜಿನ್ನಲ್ಲಿ ಚೀನಾದ ವಿದೇಶ ಸಚಿವ ವಾಂಗ್ ಯಿಯನ್ನು ಭೇಟಿ ಮಾಡಿರುವ ಉನ್ನತ ತಾಲಿಬಾನ್ ನಿಯೋಗವೊಂದು, ಅಫ್ಘಾನಿಸ್ತಾನವನ್ನು ನೆಲೆಯಾಗಿ ಬಳಸಲು ಭಯೋತ್ಪಾದಕರಿಗೆ ಅವಕಾಶ ನೀಡುವುದಿಲ್ಲ ಎಂಬ ಭರವಸೆಯನ್ನು ನೀಡಿತ್ತು.
ಅದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನಕ್ಕೆ ಆರ್ಥಿಕ ನೆರವು ನೀಡುವ ಮತ್ತು ಅದರ ಮರುನಿರ್ಮಾಣಕ್ಕಾಗಿ ಹೂಡಿಕೆ ಮಾಡುವ ಭರವಸೆಯನ್ನು ಚೀನಾ ನೀಡಿದೆ.