ಬೆಂಗಳೂರು: ದ್ವಿಚಕ್ರ ವಾಹನಗಳಿಗೆ ಸೈಡ್ ಮಿರರ್, ಇಂಡಿಕೇಟರ್ ಕಡ್ಡಾಯ

ಬೆಂಗಳೂರು, ಆ.16: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳಿಗೆ ಸೈಡ್ ಮಿರರ್, ಇಂಡಿಕೇಟರ್ ಹೊಂದುವುದು ಕಡ್ಡಾಯ. ಇಲ್ಲದಿದ್ದರೆ 500 ರೂಪಾಯಿ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರು ಮತ್ತು ಸಂಚಾರಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸೈಡ್ ಮಿರರ್ ಮತ್ತು ಇಂಡಿಕೇಟರ್ ಇಲ್ಲದ ದ್ವಿಚಕ್ರವಾಹನ ಸೇರಿ ಇತರ ವಾಹನಗಳ ವಿರುದ್ಧ ದೂರು ದಾಖಲು ಮಾಡಿಕೊಳ್ಳುತ್ತಿದ್ದಾರೆ.
ಸೈಡ್ ಮಿರರ್ ಮತ್ತು ಇಂಡಿಕೇಟರ್ ಇಲ್ಲದ ವಾಹನಗಳ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಜರಗಿಸುವಂತೆ ಬೆಂಗಳೂರು ಸಂಚಾರ ವಿಭಾಗದ ಆಯುಕ್ತರಾದ ರವಿ ಕಾಂತೇಗೌಡ ಅವರು ಸೂಚನೆ ನೀಡಿದ್ದಾರೆ. ಅದರಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಎಲ್ಲೆಡೆ ತಪಾಸಣೆ ನಡೆಸಲಾಗುತ್ತಿದೆ ಎಂದು ಸಾರಿಗೆ ಇಲಾಖೆ ನಿರೀಕ್ಷಕ ಡಾ. ಧನ್ವಂತರಿ ಒಡೆಯರ್ ಹೇಳಿದ್ದಾರೆ.
ಸೈಡ್ ಮಿರರ್ ಮತ್ತು ಇಂಡಿಕೇಟರ್ ಇಲ್ಲದೆ ಇರುವುದರಿಂದ ಅನೇಕ ಅಪಘಾತ ಪ್ರಕರಣಗಳು ನಡೆಯುತ್ತಿವೆ. ಇಂತಹ ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಮತ್ತು ಸಂಚಾರ ವಿಭಾಗದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಚಕ್ರ ವಾಹನ ಸೇರಿದಂತೆ ಇನ್ನಿತರ ವಾಹನಗಳು ಎಡಬಲಕ್ಕೆ ಸಂಚರಿಸುವ ಸಮಯದಲ್ಲಿ ಇಂಡಿಕೇಟರ್ ಇಲ್ಲವೇ ಸೈಡ್ ಮಿರರ್ ಇಲ್ಲದೆ ಇರುವುದರಿಂದ ರಸ್ತೆ ಅಫಘಾತಗಳು ಹೆಚ್ಚು ಸಂಭವಿಸುತ್ತದೆ ಇಂತಹದನ್ನು ತಡೆಗಟ್ಟಲು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ದೋಷಪೂರಿತ ನಂಬರ್ ಪ್ಲೇಟ್ ಹೊಂದಿರುವ ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.







