ತಿಗಳ ಕ್ಷತ್ರಿಯ ಸಮುದಾಯದ ಮುಖಂಡರ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂವಾದ

ಬೆಂಗಳೂರು, ಆ.16: ನಾನು ಇಲ್ಲಿ ನಿಮ್ಮಿಂದ ಸನ್ಮಾನ ಮಾಡಿಸಿಕೊಂಡು, ಜೈಕಾರ, ಮತ ಹಾಕಿಸಿಕೊಳ್ಳಲು ಬಂದಿಲ್ಲ. ಸರ್ವಜ್ಞ ಅವರು ಒಂದು ಮಾತು ಹೇಳಿದ್ದಾರೆ. "ನಿಂಬೆಗಿಂತ ಹುಳಿಯಿಲ್ಲ, ದುಂಬಿಗಿಂತ ಕಪ್ಪು ಇಲ್ಲ, ಈಶ್ವರನಿಗಿಂತ ಮಿಗಿಲಾದ ದೇವರಿಲ್ಲ, ನಂಬಿಕೆಗಿಂತ ದೊಡ್ಡ ಗುಣವಿಲ್ಲ" ಎಂದು. ನಾನು ಚಿಕ್ಕಂದಿನಿಂದಲೂ ನಿಮ್ಮ ಸಮುದಾಯದ ಜತೆ ಬೆರೆತು ಬೆಳೆದವನು. ಹೀಗಾಗಿ ಈ ಸಮುದಾಯದ ಮೇಲೆ ನನಗೆ ಹೆಚ್ಚು ನಂಬಿಕೆ ಎಂದು ಶಿವಕುಮಾರ್ ಹೇಳೀದರು.
ನಗರದ ಸಿದ್ದಾಪುರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಿಗಳ ಕ್ಷತ್ರಿಯ ಸಮುದಾಯದ ಮುಖಂಡರ ಜತೆ ಆ ಸಮಾಜದ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದ ಶಿವಕುಮಾರ್, ಡಾ.ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದಾಗ, ಪೆÇಲೀಸ್ ಅಧಿಕಾರಿಗಳು ದಟ್ಟ ಕಾಡಿನಲ್ಲಿ ಹೋಗಲು ಹಿಂಜರಿಯುತ್ತಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು, ನಮ್ಮ ತಾಲೂಕಿನಲ್ಲಿ ಶಿಕಾರಿ ಮಾಡುತ್ತಿದ್ದ ತಿಗಳ ಸಮುದಾಯದ ಸ್ನೇಹಿತರಿಗೆ ಗುರುತಿನ ಚೀಟಿ ಕೊಟ್ಟು ಕಾರ್ಯಾಚರಣೆಗೆ ಬಳಸಿಕೊಳ್ಳಲು ಸೂಚಿಸಿದ್ದರು. ಹೀಗೆ ತಿಗಳ ಸಮುದಾಯದವರು ಧೈರ್ಯವಂತರು ಹಾಗೂ ನಂಬಿಕಸ್ಥರು ಎಂದು ಸ್ಮರಿಸಿದರು.
ನಿಮ್ಮ ವಿಚಾರ, ಆಲೋಚನೆ, ಸಮಸ್ಯೆಗಳನ್ನು ಆಲಿಸಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ. 2ಎ ಮೀಸಲಾತಿಯಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ ಎಂಬುದು ನಿಮ್ಮ ನೋವು. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಹಾಯ ಬೇಕು ಎಂದು ಕೇಳಿಕೊಂಡಿದ್ದೀರಿ. ಪಿ.ಆರ್.ರಮೇಶ್ ಅವರನ್ನು ಮೇಯರ್ ಮಾಡುವ ಸಂದರ್ಭದಲ್ಲಿ ಏನೇನಾಯ್ತು ಎಂದು ನಾವೆಲ್ಲ ನೋಡಿದ್ದೇವೆ. ಇಡೀ ಪಾಲಿಕೆ ವ್ಯವಸ್ಥೆ ಬಗ್ಗೆ ಸರಿಯಾದ ಜ್ಞಾನ ಇರುವವರು ರಮೇಶ್. ಇನ್ನು ಗುಣಶೇಖರ್, ಬಸವರಾಜ್, ಕೃಷ್ಣಮೂರ್ತಿ ಅವರು ಸೇರಿದಂತೆ ಅನೇಕ ಸಮರ್ಥ ನಾಯಕರಿದ್ದಾರೆ. ಅವರನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಸರಕಾರಿ ಕಾರ್ಯಕ್ರಮದಲ್ಲಿ ಹೂವಿನ ನಿಷೇಧ ನಿರ್ಧಾರದಿಂದ ಆಗಿರುವ ತೊಂದರೆ ಸೇರಿದಂತೆ ನೀವು ಅನೇಕ ನೋವು ಹಾಗೂ ಬೇಡಿಕೆ ಮುಂದಿಟ್ಟಿದ್ದೀರಿ. ಕೋವಿಡ್ ಸಮಯದಲ್ಲಿ ಈ ಸಮುದಾಯಕ್ಕೆ ಆದ ಅನ್ಯಾಯ ಆ ಭಗವಂತನಿಗೇ ಗೊತ್ತು. ಪ್ರತಿ ಹೆಕ್ಟೇರ್ ಹೂ ಬೆಳೆಗಾರರಿಗೆ 10 ಸಾವಿರ ರೂ. ಮಾತ್ರ ಪರಿಹಾರ ಘೋಷಿಸಿದರು ಎಂದು ಶಿವಕುಮಾರ್ ತಿಳಿಸಿದರು.
ಕರಗ ಉತ್ಸವಕ್ಕೆ ಅನುದಾನ ನಿಲ್ಲಿಸಿರುವ ಬಗ್ಗೆ ಪಿ.ಆರ್.ರಮೇಶ್ ಈ ಹಿಂದೆ ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದ ವೇಳೆ ಗಮನಕ್ಕೆ ತಂದಿದ್ದರು. ಈ ವಿಚಾರವಾಗಿ ಆದೇಶ ಹೊರಡಿಸಬೇಕು ಎನ್ನುವಷ್ಟರಲ್ಲಿ ನನ್ನ ಖಾತೆ ಬದಲಾಯಿತು. ಮುಂದೆ ಒಳ್ಳೆಯ ಕಾಲ ಬಂದಾಗ ಅದನ್ನು ಸರಿ ಮಾಡೋಣ. ಈ ಅನುದಾನದಿಂದಲೇ ಹಬ್ಬ ನಡೆಯುತ್ತದೆ ಎಂದಲ್ಲ. ಆದರೆ ಈ ಉತ್ಸವಕ್ಕೆ ಒಂದು ಪುಷ್ಟಿ ಸಿಗುತ್ತದೆ ಎಂದು ಅವರು ಹೇಳಿದರು.
ಇವತ್ತು ರಾಜಕೀಯ ಸ್ಥಾನಮಾನದ ಬಗ್ಗೆ ಮಾತನಾಡಿದ್ದೀರಿ. ರಾಜಕೀಯ ಸ್ಥಾನಮಾನ ಇಲ್ಲದಿದ್ದರೆ ಧ್ವನಿ ಎತ್ತಲು ಸಾಧ್ಯವಿಲ್ಲ. ಶೈಕ್ಷಣಿಕ ವಿಚಾರವೂ ಬೇಕು. ಹೀಗಾಗಿ ಈ ಸಮಾಜಕ್ಕೆ ಯಾವ ರೀತಿ ಸಹಾಯ ಮಾಡಬಹುದು ಎಂದು ತಿಳಿಯಲು ನಿಮ್ಮ ಜತೆ ಈ ಸಂವಾದ ಕಾರ್ಯಕ್ರಮ ಮಾಡುತ್ತಿದ್ದೇನೆ. ಮುಂದೆ ನಿಮ್ಮ ಜತೆಯಲ್ಲೇ ಇರುತ್ತೇನೆ ಎಂದು ಹೇಳಲು ಈ ಪ್ರಯತ್ನ ಮಾಡಲಾಗುತ್ತಿದೆ. ನಿಮಗೆ ಅವಕಾಶ ಸಿಗುತ್ತಿಲ್ಲ ಎಂಬ ಬಗ್ಗೆ ನಾನು ನಮ್ಮ ನಾಯಕರ ಜತೆ ಚರ್ಚೆ ಮಾಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.
ನೀವು ಮೂಲತಃ ಕ್ಷತ್ರಿಯರು. ನಿಮ್ಮಲ್ಲಿ ಹೋರಾಟದ ಸಾಮಥ್ರ್ಯವಿದೆ. ಯಾವ ನಿರ್ಧಾರವನ್ನು ಬೇಕಾದರೂ ಬದಲಿಸುವ ಶಕ್ತಿ ಇದೆ. ಈ ದೇಶದ ಇತಿಹಾಸದಲ್ಲಿ ನೀವು ಪಾಲುದಾರರು. ರಾಜಕಾರಣ ಒಂದೇ ಮುಖ್ಯವಲ್ಲ. ನಿಮ್ಮ ಭಾವನೆಯನ್ನು ನಿಮ್ಮ ಬಾಯಿಂದಲೇ ಕೇಳಿ ತಿಳಿದುಕೊಳ್ಳಲು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಸಮುದಾಯದ ನಾಯಕರನ್ನು ಕರೆದು ಮಾತನಾಡುತ್ತೇನೆ. ನೀವು ಇಂದು ಹೇಳಿಕೊಂಡಿರುವ ದುಗುಡವನ್ನು ನಾನು ಆಲಿಸಿ, ದಾಖಲಿಸಿಕೊಂಡಿದ್ದೇನೆ ಎಂದು ಶಿವಕುಮಾರ್ ಹೇಳಿದರು.
"ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು" ಎಂಬಂತೆ ನಾನು ನಿಮ್ಮ ಜತೆಗೂಡಲು ಬಂದಿದ್ದೇನೆ. ನಿಮ್ಮ ಜತೆ ನಾನು ಇದ್ದೀನಿ. ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ವಿ.ಆರ್. ಸುದರ್ಶನ್, ಮಾಜಿ ಶಾಸಕರಾದ ಲಕ್ಷ್ಮೀ ನಾರಾಯಣ್, ಮುಖ್ಯಮಂತ್ರಿ ಚಂದ್ರು, ನರೇಂದ್ರಬಾಬು, ಮಾಜಿ ಎಂಎಲ್ಸಿ ಎಂ.ಸಿ.ವೇಣುಗೋಪಾಲ್, ಮಾಜಿ ಮೇಯರ್ ಪಿ.ಆರ್.ರಮೇಶ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್, ಸಮುದಾಯದ ಮುಖಂಡರಾದ ಶ್ರೀಕಾಂತ್, ಅರ್ಜುನ್, ಜಗದೀಶ್, ಶ್ರೀಧರ್ ಭಾಗವಹಿಸಿದ್ದರು.







