ಅಪ್ಘಾನ್ ನಲ್ಲಿ ಭಾರತ ಹೂಡಿದ 23,000 ಕೋಟಿ ರುಪಾಯಿಗಳ ಗತಿಯೇನು?: ಭಾರತದ ಆರ್ಥಿಕ ತಜ್ಞರ ಆತಂಕ

ಸಾಂದರ್ಭಿಕ ಚಿತ್ರ
ಕಾಬೂಲ್, ಆ.16: ಕಾಬೂಲ್ ಮೇಲೆ ತಾಲಿಬಾನ್ಗಳು ನಿಯಂತ್ರಣ ಸಾಧಿಸಿರುವುದು ಆ ದೇಶದ ಭವಿಷ್ಯದ ಮೇಲಷ್ಟೇ ಅಲ್ಲ, ಭಾರತವೂ ಸೇರಿದಂತೆ ಹಲವು ದೇಶಗಳ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಆತಂಕ ಎದುರಾಗಿದೆ.
ಭಾರತ 2012ರಿಂದ ಇಲ್ಲಿಯವರೆಗೆ ಸುಮಾರು 2 ಬಿಲಿಯನ್ ಡಾಲರ್ ಗಳನ್ನು ಹೂಡಿಕೆ ಮಾಡಿದ್ದು, ಅಫ್ಘಾನಿಸ್ತಾನದ ಸದ್ಯದ ರಾಜಕೀಯ ಬೆಳವಣಿಗೆ ಈ ಹೂಡಿಕೆಯ ಭವಿಷ್ಯವನ್ನು ಆತಂಕದಲ್ಲಿ ತಳ್ಳಿದೆ.
ಕಳೆದ ಎರಡು ದಶಕದಲ್ಲಿ 23,000 ಕೋಟಿ ರೂಪಾಯಿಗಳನ್ನು ಭಾರತ ಬೇರೆ ಬೇರೆ ಯೋಜನೆಗಳಿಗೆ ಈಗಾಗಲೇ ಹೂಡಿಕೆ ಮಾಡಿದೆ. 134 ಮಿಲಿಯನ್ ಡಾಲರ್ ವೆಚ್ಚದಲ್ಲಿ ಜರಾಂಜ್-ದಿಲೆರಾಮ್ ರಾಷ್ಟ್ರೀಯ ಹೆದ್ದಾರಿ ಯೋಜನೆ, ಹಿಂದೂಕುಷ್ ಪರ್ವತಗಳ ಮೇಲಿನಿಂದ ಉಝ್ಬೆಕ್ ಗಡಿಯಿಂದ ಕಾಬೂಲ್ ವರೆಗಿನ ವಿದ್ಯುತ್ ಪ್ರಸರನಾ ಯೋಜನೆ, ಅಫ್ಘಾನ್-ಇಂಡಿಯಾ ಫ್ರೆಂಡ್ಶಿಪ್ ಡ್ಯಾಮ್ ಎಂದೇ ಕರೆಯಲ್ಪಡುವ ಸಲ್ಮಾ ಡ್ಯಾಮ್ ಯೋಜನೆ ಸೇರಿದಂತೆ ಹಲವು ಬೃಹತ್ ಯೋಜನೆಗಳಿಗೆ ಭಾರತ ಈಗಾಗಲೇ ಹೂಡಿಕೆ ಮಾಡಿದೆ.
ಈ ಹೂಡಿಕೆ ಒಂದು ವೇಳೆ ಮುಳುಗಿದ್ದೇ ಆದರೆ ಅದು ಭಾರತದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಭಾರತದ ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಭಾರತ ತಾಲಿಬಾನ್ ಆಕ್ರಮಣದ ಕುರಿತಂತೆ ಸದ್ಯಕ್ಕೆ ಮೌನ ನಿಲುವನ್ನು ತಾಳಿದೆ. ರಾಜಕೀಯ ಬೆಳವಣಿಗೆಗಳಿಗೆ ಅನುಸಾರವಾಗಿ ಅದು ತನ್ನ ನಿಲುವನ್ನು ವ್ಯಕ್ತಪಡಿಸುವ ಸಾಧ್ಯತೆಗಳಿವೆ.
ಅಫ್ಗಾನ್ ನ ಪಶ್ಚಿಮದಲ್ಲಿ ಇರಾನ್ ಮತ್ತು ಇರಾಕ್ ಗಳಿವೆ. ಉತ್ತರದಲ್ಲಿ ತಜಿಕಿಸ್ತಾನ್, ತುರ್ಕೇಮಿನಿಸ್ತಾನ್ ಮತ್ತು ಉಜ್ಬೇಕಿಸ್ತಾನಗಳಿವೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಹಣಕಾಸು ಮಾರುಕಟ್ಟೆಗಳು ಹಾಗೂ ಹೂಡಿಕೆದಾರರ ತಕ್ಷಣದ ಗಮನ ಪೂರ್ವದ ನೆರೆರಾಷ್ಟ್ರ ಪಾಕಿಸ್ತಾನದ ಮೇಲಿದೆ. ಬೃಹತ್ ಇಕ್ವಿಟಿ ಮಾರುಕಟ್ಟೆ ಹೊಂದಿರುವ ಪಾಕಿಸ್ತಾನ 6 ಬಿಲಿಯನ್ ಡಾಲರ್ ಐಎಂಎಫ್ ಯೋಜನೆಯನ್ನು ಅವಲಂಬಿಸಿದೆ. ವರ್ಷಾನುಗಟ್ಟಲೆ ನಡೆಯುವ ಹಿಂಸಾಚಾರ, ಬೃಹತ್ ಪ್ರಮಾಣದಲ್ಲಿ ನಿರಾಶ್ರಿತರು ವಲಸೆ ಬರುವುದರಿಂದ ಆರ್ಥಿಕತೆಯ ದುರಸ್ತಿಗೆ ಹಮ್ಮಿಕೊಂಡಿರುವ ಯೋಜನೆಗಳ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆಯಿದೆ.
ಈ ಮಧ್ಯೆ, ಪಾಕಿಸ್ತಾನದ ಸರಕಾರಿ ಬಾಂಡ್ ಗಳ ಬೆಲೆಯಲ್ಲೂ ಈ ವರ್ಷ ಸುಮಾರು 8%ದಷ್ಟು ಕುಸಿತವಾಗಿದೆ. ಐಎಂಎಫ್ ನೆರವಿನ ಕಂತು ಇನ್ನೂ ಬಿಡುಗಡೆಯಾಗದಿರುವುದು ಇದಕ್ಕೆ ಕಾರಣವಾಗಿದೆ ಎಂದು ವರದಿ ಹೇಳಿದೆ.
ವಿಶೇಷವಾಗಿ ಪಾಕಿಸ್ತಾನದ ಪಶ್ಚಿಮ ಭಾಗದಲ್ಲಿ ವಲಸಿಗರ ಮತ್ತೊಂದು ಕಂತಿನ ಒಳಹರಿವು ಮತ್ತು ನಗರ ಪ್ರದೇಶಗಳ ಅಸ್ಥಿರತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ತೊಡಕುಂಟುಮಾಡುವ ಉದ್ದೇಶದ ಹಿಂಸಾನಿರತ ತಂಡಗಳ ಹೆಚ್ಚಳದಿಂದ ಪಾಕಿಸ್ತಾನದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಆದರೆ ಒಂದು ವೇಳೆ ತಾಲಿಬಾನ್ಗಳನ್ನು ಅಫ್ಗಾನ್ ನ ಸರಕಾರದಲ್ಲಿ ಸೇರಿಸಿಕೊಂಡರೆ ಈ ಅಪಾಯ ತುಸುಮಟ್ಟಿಗೆ ಕಡಿಮೆಯಾಗಬಹುದು ಎಂದು ಆರ್ಥಿಕ ವಿಶ್ಲೇಷಕ ಹಸ್ನೈನ್ ಮಲಿಕ್ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಾಲಿಬಾನ್ ಸರಕಾರದ ಜೊತೆಗೆ ಅತ್ಯಂತ ಮೃದುವಾಗಿ ವರ್ತಿಸುತ್ತಿವೆ,ಪರೋಕ್ಷವಾಗಿ ಬೆಂಬಲವನ್ನೂ ನೀಡುತ್ತಿದೆ ಎನ್ನಲಾಗಿದೆ. ಭಾರತವೂ ತಿಂಗಳ ಹಿಂದೆ, ತಾಲಿಬಾನ್ ಜೊತೆಗೆ ಗುಪ್ತಮಾತುಕತೆಯೊಂದನ್ನು ನಡೆಸಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಸ್ಮರಿಸಬಹುದು.







