ಹೈಟಿ ಭೂಕಂಪ: ಮೃತರ ಸಂಖ್ಯೆ 1,297ಕ್ಕೆ ಏರಿಕೆ: 5,700 ಮಂದಿಗೆ ಗಾಯ, ಸಾವಿರಾರು ಕಟ್ಟಡ ನೆಲಸಮ

photo: twitter.com/alicexz
ಪೋರ್ಟ್ ಅ ಪ್ರಿನ್ಸ್, ಆ.16: ರವಿವಾರ ಹೈಟಿಯಲ್ಲಿ ಸಂಭವಿಸಿದ ಭೂಕಂಪನದಿಂದ ಮೃತಪಟ್ಟವರ ಸಂಖ್ಯೆ 1,297ಕ್ಕೇರಿದ್ದು ಸಾವಿರಾರು ಕಟ್ಟಡಗಳು ನೆಲಸಮವಾಗಿದೆ ಎಂು ಎಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
7.2 ಡಿಗ್ರಿ ತೀವ್ರತೆಯ ಭೂಕಂಪದಿಂದ ಕನಿಷ್ಟ 5,700 ಮಂದಿ ಗಾಯಗೊಂಡಿದ್ದು ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹೈಟಿ ರಾಜಧಾನಿ ಪೋರ್ಟ್ ಅ ಪ್ರಿನ್ಸ್ ನ ಸುಮಾರು 125 ಕಿ.ಮೀ ಪಶ್ಚಿಮದಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು. ಈ ಮಧ್ಯೆ ಸೋಮವಾರ ತಡರಾತ್ರಿ ಅಥವಾ ಮಂಗಳವಾರ ಉಷ್ಣವಲಯದ ಚಂಡಮಾರುತ 'ಗ್ರೇಸ್' ಹೈಟಿಗೆ ಅಪ್ಪಳಿಸುವ ನಿರೀಕ್ಷೆ ಇರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಅಪಾಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇಶದ ಬಹುತೇಕ ಆರೋಗ್ಯಕೇಂದ್ರಗಳು ಮತ್ತು ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿದ್ದು, ಇನ್ನಷ್ಟು ಗಾಯಾಳುಗಳನ್ನು ಕರೆತರುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು ಆಸ್ಪತ್ರೆಯ ಹೊರಗೆ ಮರದಡಿ, ಅಥವಾ ರಸ್ತೆ ಬದಿ ಚಾಪೆ ಹಾಕಿ ರೋಗಿಗಳನ್ನು ಆರೈಕೆ ಮಾಡುವ ಪರಿಸ್ಥಿತಿ ಎದುರಾಗಿದೆ . ಪಶ್ಚಾತ್ಕಂಪನದ(ಭೂಕಂಪನದ ಬಳಿಕ ನಡೆಯುವ ಕಂಪನ) ಭೀತಿಯಿಂದ ಕರಾವಳಿ ನಗರ ಲೆಸ್ಕೇಯಸ್ನಲ್ಲಿ ಹಲವು ಮಂದಿ ಮನೆಯ ಹೊರಗಡೆ ರಾತ್ರಿ ಕಳೆದು ಎಂದು ರಾಯ್ಟರ್ಸ್ ವರದಿ ಮಾಡಿದೆ.
ಕುಸಿದು ಬಿದ್ದಿರುವ ಕಟ್ಟಡದ ಅವಶೇಷಗಳಡಿಯಿಂದ ತಮ್ಮ ಬಂಧುಗಳನ್ನು ಹುಡುಕುತ್ತಿರುವ ಕೆಲವರ ಫೋಟೋಗಳನ್ನು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಹಂಚಿಕೊಂಡಿದೆ. ಭೂಕಂಪನದಿಂದ ತೀವ್ರ ಬಾಧಿತವಾಗಿರುವ ಆರೋಗ್ಯ ಕೇಂದ್ರಗಳಿಗೆ ಔಷಧಗಳನ್ನು ರವಾನಿಸಲಾಗುತ್ತಿದೆ. ತುರ್ತು ಆರೈಕೆಯ ಅಗತ್ಯ ಇರುವವರಿಗೆ ಸ್ಥಳಾವಕಾಶ ಕಲ್ಪಿಸಲು ಆರೋಗ್ಯ ಕೇಂದ್ರಗಳಲ್ಲಿರುವ ಕೆಲವರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಹೈಟಿಪ್ರಧಾನಿ ಅರಾಯಲ್ ಹೆನ್ರಿ ಹೇಳಿದ್ದಾರೆ.
ಭೂಕಂಪನದ ಕಾರಣದಿಂದ ಹೈಟಿಯಲ್ಲಿ ಒಂದು ತಿಂಗಳ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಸರಕಾರ ಪ್ರಕಟಿಸಿದೆ.







