ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಸೇನೆಯ ಶೋಧ ಕಾರ್ಯಾಚರಣೆ; 4 ಪೆಲೆಸ್ತೀನಿಯರ ಹತ್ಯೆ

photo: twitter.com/AlaaDaraghme
ಜೆರುಸಲೇಂ, ಆ.16; ಆಕ್ರಮಿತ ಪಶ್ಚಿಮ ದಂಡೆಯ ಉತ್ತರದಲ್ಲಿರುವ ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ಸೋಮವಾರ ಇಸ್ರೇಲ್ ಸೇನೆ ನಡೆಸಿದ ಶೋಧ ಕಾರ್ಯಾಚರಣೆ ಸಂದರ್ಭ ಘರ್ಷಣೆ ಭುಗಿಲೆದ್ದಿದ್ದು ಇಸ್ರೇಲ್ ಸೇನೆಯ ಗುಂಡಿಗೆ ಕನಿಷ್ಟ 4 ಪೆಲೆಸ್ತೀನಿಯರು ಬಲಿಯಾಗಿದ್ದಾರೆ ಎಂದ ು ಮಾಧ್ಯಮಗಳು ವರದಿ ಮಾಡಿವೆ.
ಇತರ ಇಬ್ಬರನ್ನು ಇಸ್ರೇಲ್ ಸೇನೆ ವಶಕ್ಕೆ ಪಡೆದಿದೆ. ಬಂಧಿತರಲ್ಲಿ ಒಬ್ಬನಾದ ಮುಹಮ್ಮದ್ ಅಬುಝಿನಾ ಎಂಬಾತನ ಮನೆಗೆ ನುಗ್ಗಿ ಕೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.
ಸಲೇಹ್ ಮುಹಮ್ಮದ್ ಅಮ್ಮಾರ್ (19 ವರ್ಷ) ಮತ್ತು ರಯೀದ್ ಝಿಯಾದ್ ಅಬುಸೈಫ್(21 ವರ್ಷ) ಗುಂಡಿನ ಹಾರಾಟದಲ್ಲಿ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಜೆನಿನ್ ಸಿಟಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ. ಇಸ್ರೇಲ್ ಸೇನೆಯ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಇಬ್ಬರು ನಾಗರಿಕರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಗುಂಡೇಟಿನಿಂದ ಮೃತಪಟ್ಟ ಇತರ ಇಬ್ಬರನ್ನು ನೂರ್ ಜರಾರ್ ಮತ್ತು ಅಮ್ಜದ್ ಇಯಾದ್ ಅಜ್ಮಿ ಎಂದು ಗುರುತಿಸಲಾಗಿದ್ದು ಅವರ ಮೃತದೇಹವನ್ನು ಇಸ್ರೇಲ್ ಸೇನೆ ಕೊಂಡೊಯ್ದಿದೆ ಎಂದು ವರದಿ ಹೇಳಿದೆ. ನಾಲ್ವರು ಪೆಲೆಸ್ತೀನಿಯರು ಮೃತರಾಗಿರುವುದನ್ನು ಜೆನಿನ್ ಗವರ್ನರ್ ದೃಢಪಡಿಸಿದ್ದಾರೆ.





